ಚಿಕ್ಕಬಳ್ಳಾಪುರ: ಪೋಷಕರೊಂದಿಗೆ ಬಟ್ಟೆ ಖರೀದಿಸಲು ಬಂದಿದ್ದ ನಾಲ್ಕು ವರ್ಷದ ಬಾಲಕಿ ಆಟವಾಡುವ ವೇಳೆ ಅಂಗಡಿಯ ಗ್ರಿಲ್‌ನಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಪಿಳ್ಳಪ್ಪ ಕಾಂಪ್ಲೆಕ್ಸ್‌ನಲ್ಲಿ ನಡೆದಿದೆ. ಬಾಲಕಿಗೆ ಪ್ರಾಥಮಿಕ ಚಿಕಿತ್ಸೆ ಬಳಿಕ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಗೊಲ್ಲರದೊಡ್ಡಿ ಗ್ರಾಮದ ನಾರಾಯಣಸ್ವಾಮಿ ಹಾಗೂ ಮಧು ದಂಪತಿಯ ಪುತ್ರಿ ಗಗನ ಸಿಂಧು ಈ ದುರ್ಘಟನೆಗೆ ಒಳಗಾಗಿದ್ದಾಳೆ. ಪೋಷಕರು ಖರೀದಿಯಲ್ಲಿ ನಿರತರಾಗಿದ್ದ ವೇಳೆ ಬಾಲಕಿ ಗ್ರಿಲ್ ಏರಿ ಆಟವಾಡುತ್ತಿದ್ದಳು.
ತಾಯಿ ಹಲವು ಬಾರಿ ಮಗುವನ್ನು ಗ್ರಿಲ್‌ನಿಂದ ದೂರ ಕರೆದುಕೊಂಡು ಬಂದಿದ್ದರೂ, ಬಾಲಕಿ ಮತ್ತೆ ಅಲ್ಲಿಗೆ ತೆರಳಿ ಆಟವಾಡಲು ಮುಂದಾಗಿದ್ದಳು. ಇದೇ ವೇಳೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾಳೆ.
ತಕ್ಷಣವೇ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಅಂಗಡಿ ಮಾಲೀಕರ ಪ್ರಕಾರ, ಬಾಲಕಿ ಹಲವು ಬಾರಿ ಗ್ರಿಲ್ ಬಳಿ ಹೋಗುತ್ತಿದ್ದಳು. ತಾಯಿ ಕೂಡ ಪದೇಪದೆ ತಡೆದಿದ್ದರೂ ಕೊನೆಗೆ ಈ ಅವಘಡ ಸಂಭವಿಸಿದೆ. ಘಟನೆ ಬಳಿಕ ಕುಟುಂಬಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.



