ಬೆಂಗಳೂರು: ನಗರದ ಬನ್ನೇರುಘಟ್ಟ ರಸ್ತೆಯ ವೀವರ್ಸ್ ಕಾಲೋನಿಯಲ್ಲಿರುವ ನ್ಯೂ ಬ್ಲಾಸಮ್ ಖಾಸಗಿ ಶಾಲೆಯಲ್ಲಿ ಐದನೇ ತರಗತಿ ವಿದ್ಯಾರ್ಥಿಯೊಬ್ಬ ತರಗತಿಯಲ್ಲೇ ಕುಸಿದುಬಿದ್ದು ಮೃತಪಟ್ಟಿರುವ ದಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜೂನ್ 10ರಂದು ನಡೆದ ಈ ಘಟನೆಯಲ್ಲಿ 12 ವರ್ಷದ ಅರ್ಹನ್ ಪಾಷಾ ಮೃತಪಟ್ಟಿದ್ದಾನೆ.
ಮಧ್ಯಾಹ್ನ ಸುಮಾರು 1 ಗಂಟೆ ವೇಳೆಗೆ ಬಾಲಕ ತನಗೆ ಸುಸ್ತಾಗುತ್ತಿದೆ ಎಂದು ಶಿಕ್ಷಕಿಗೆ ತಿಳಿಸಿದ್ದಾನೆ ಎನ್ನಲಾಗಿದೆ. ಬಳಿಕ ತರಗತಿಗೆ ಬಂದು ಬೆಂಚ್ ಮೇಲೆ ಕುಳಿತ ಕೆಲವೇ ಕ್ಷಣಗಳಲ್ಲಿ ಕುಸಿದುಬಿದ್ದಿದ್ದಾನೆ. ಆದರೆ, ಬಾಲಕನ ಆರೋಗ್ಯ ಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸದೆ ಶಾಲಾ ಸಿಬ್ಬಂದಿ ಹಾಗೂ ಶಿಕ್ಷಕರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಕುಸಿದುಬಿದ್ದ ವಿದ್ಯಾರ್ಥಿಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸುವ ಬದಲು ಸುಮಾರು 45 ನಿಮಿಷಗಳ ಕಾಲ ತರಗತಿ ಕೊಠಡಿಯಲ್ಲೇ ಇರಿಸಿಕೊಂಡಿದ್ದರು ಎಂದು ಪೋಷಕರು ಆರೋಪಿಸಿದ್ದು, ಈ ದೃಶ್ಯ ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿರುವುದಾಗಿ ತಿಳಿಸಿದ್ದಾರೆ.
ನಂತರ ಶಾಲಾ ಆಡಳಿತವು ಕುಟುಂಬಸ್ಥರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಪೋಷಕರು ಶಾಲೆಗೆ ಧಾವಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆತಿದ್ದರೆ ಮಗುವಿನ ಜೀವ ಉಳಿಯಬಹುದಿತ್ತು ಎಂದು ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.



