ರಾಯಚೂರು: ಭಾರತೀಯ ಪ್ರಜೆ ಎಂಬಂತೆ ನಕಲಿ ದಾಖಲೆಗಳನ್ನು ಪಡೆದು ಹಲವು ವರ್ಷಗಳಿಂದ ವಾಸವಿದ್ದ ಬಾಂಗ್ಲಾದೇಶದ ಪ್ರಜೆಯೊಬ್ಬನಿಗೆ ಸಿಂಧನೂರು ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಪಾಸ್‌ಪೋರ್ಟ್ ಪಡೆದಿದ್ದರೂ ಇಮಿಗ್ರೇಷನ್ ಪರಿಶೀಲನೆಯ ವೇಳೆ ಸಿಕ್ಕಿಬಿದ್ದಿದ್ದ ಆರೋಪಿಗೆ ಇದೀಗ ಶಿಕ್ಷೆ ಪ್ರಕಟವಾಗಿದೆ.
ಶೋರನಜೀತ್ ಮಂಡಲ್ ಎಂಬಾತ ಅಕ್ರಮವಾಗಿ ಭಾರತ ಪ್ರವೇಶಿಸಿ ಸಿಂಧನೂರು ತಾಲೂಕಿನ ನಿರಾಶ್ರಿತರ ಕೇಂದ್ರದ ವ್ಯಾಪ್ತಿಯಲ್ಲಿ ವಾಸವಾಗಿದ್ದ. ಆಧಾರ್, ಮತದಾರರ ಗುರುತಿನ ಚೀಟಿ, ಪಾನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಸೇರಿದಂತೆ ಹಲವು ದಾಖಲೆಗಳನ್ನು ಪಡೆದು ಭಾರತೀಯ ಪ್ರಜೆಯಂತೆ ಬದುಕುತ್ತಿದ್ದನು.
ಈ ದಾಖಲೆಗಳ ಆಧಾರದಲ್ಲಿ ಪಾಸ್‌ಪೋರ್ಟ್ ಕೂಡ ಪಡೆದಿದ್ದ ಆತ, 2018ರಲ್ಲಿ ಬಾಂಗ್ಲಾದೇಶಕ್ಕೆ ತೆರಳುವ ವೇಳೆ ಇಮಿಗ್ರೇಷನ್ ಅಧಿಕಾರಿಗಳ ತಪಾಸಣೆಯಲ್ಲಿ ಸಿಕ್ಕಿಬಿದ್ದಿದ್ದ. ನಂತರ ಆತನ ವಿರುದ್ಧ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯ, ಆರೋಪಿಗೆ ಮೂರು ವರ್ಷಗಳ ಸಜೆ ಹಾಗೂ ₹5,000 ದಂಡ ವಿಧಿಸಿದೆ.
ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿರುದ್ಧ ಪೊಲೀಸ್ ಕಾರ್ಯಾಚರಣೆಗಳು ತೀವ್ರಗೊಂಡಿದ್ದು, ಮಂಗಳೂರು ಮತ್ತು ಸುರತ್ಕಲ್‌ನಲ್ಲಿ ನಡೆದ ಕಾರ್ಯಾಚರಣೆಗಳಲ್ಲೂ ಹಲವು ವಲಸಿಗರನ್ನು ಬಂಧಿಸಿರುವುದು ಗಮನಾರ್ಹವಾಗಿದೆ.



