HomeGadag Newsಬಿಡದಿ ಭೂಸ್ವಾಧೀನ ವಿವಾದ: ಸಿಎಂ ವಿರುದ್ಧ ವಿಜಯೇಂದ್ರ ತೀವ್ರ ವಾಗ್ದಾಳಿ

ಬಿಡದಿ ಭೂಸ್ವಾಧೀನ ವಿವಾದ: ಸಿಎಂ ವಿರುದ್ಧ ವಿಜಯೇಂದ್ರ ತೀವ್ರ ವಾಗ್ದಾಳಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆಯ ಘನತೆಗೆ ತಕ್ಕಂತೆ ನಡೆದುಕೊಳ್ಳದೆ, ರಿಯಲ್ ಎಸ್ಟೇಟ್ ಏಜೆಂಟ್‌ನಂತೆ ವರ್ತಿಸುತ್ತಿದ್ದಾರೆ. ಬಿಡದಿಯಲ್ಲಿ ರೈತರ ಜಮೀನುಗಳನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವ ಮೂಲಕ ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ವಾಗ್ದಾಳಿ ನಡೆಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಸ್ವಯಂಪ್ರೇರಣೆಯಿಂದ ಭೂಮಿ ನೀಡಿದರೆ ಮಾತ್ರ ಭೂಸ್ವಾಧೀನ ಮಾಡಬೇಕು. ಆದರೆ, ಬಿಡದಿಯಲ್ಲಿ ರಾತ್ರಿ ವೇಳೆ ಗೂಂಡಾಗಳನ್ನು ರೈತರ ಮನೆಗಳಿಗೆ ಕಳುಹಿಸಿ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು.

ಕನಕಪುರದಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ಪ್ರಸ್ತಾಪವೂ ರಿಯಲ್ ಎಸ್ಟೇಟ್ ಲಾಬಿಯ ಭಾಗವಾಗಿದೆ. ತುಮಕೂರು ಅಥವಾ ಮಧ್ಯ ಕರ್ನಾಟಕ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಿಸಿದರೆ ರಾಜ್ಯದ ಬಹುತೇಕ ಜನರಿಗೆ ಅನುಕೂಲವಾಗಲಿದೆ. ಆದರೆ, ತಮ್ಮ ರಾಜಕೀಯ ಹಾಗೂ ವೈಯಕ್ತಿಕ ಹಿತಾಸಕ್ತಿಗಾಗಿ ಕನಕಪುರವನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಹಿಂದೂಗಳ ಮೇಲಿನ ದೌರ್ಜನ್ಯ, ಕೊಲೆ ಹಾಗೂ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮಿತಿಮೀರಿದೆ ಎಂದು ಆರೋಪಿಸಿದ ಅವರು, ಹಾವೇರಿ, ರಟ್ಟಿಹಳ್ಳಿ, ಯಲ್ಲಾಪುರ ಹಾಗೂ ಕೊಪ್ಪಳದ ಘಟನೆಗಳನ್ನು ಉಲ್ಲೇಖಿಸಿ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದರು.

ಎಸ್‌ಐಆರ್ (ವಿಶೇಷ ಸಮಗ್ರ ಪರಿಷ್ಕರಣೆ) ಕಾರ್ಯವನ್ನು ಬಿಜೆಪಿ ಸವಾಲಾಗಿ ಸ್ವೀಕರಿಸಿದ್ದು, ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕರ್ತರು ಮನೆಮನೆಗೆ ತೆರಳಿ ಕೆಲಸ ಮಾಡುತ್ತಿದ್ದಾರೆ. ಇದೇ ವೇಳೆ ಅಕ್ರಮ ವಲಸಿಗರಿಗೆ ಪಿಆರ್‌ಸಿ ನೀಡುತ್ತಿರುವುದು ಖಂಡನೀಯ ಎಂದು ಹೇಳಿದರು.

ರಾಜ್ಯದಲ್ಲಿ ಭೀಕರ ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದರೂ ಕೃಷಿ ಸಚಿವರೇ ಇಲ್ಲದಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಪ್ರಧಾನಿಗೆ ಪತ್ರ ಬರೆದು ರಾಜಕೀಯ ಮಾಡುವ ಬದಲು ರೈತರಿಗೆ ತಕ್ಷಣ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರದ ಜನವಿರೋಧಿ ಆಡಳಿತ, ರೈತ ವಿರೋಧಿ ನೀತಿ ಹಾಗೂ ಕಾನೂನು ಸುವ್ಯವಸ್ಥೆ ವೈಫಲ್ಯ ಖಂಡಿಸಿ ಜುಲೈ 17ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಿಜಯೇಂದ್ರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಮುಖಂಡರಾದ ಶರಣು ತಳ್ಳಿಕೇರಿ, ಲಿಂಗರಾಜ ಪಾಟೀಲ, ಫಕ್ಕಿರೇಶ ರಟ್ಟಿಹಳ್ಳಿ, ಎಂ.ಎಸ್. ಕರಿಗೌಡ್ರ, ಎಂ.ಎಂ. ಹಿರೇಮಠ, ಭೀಮಸಿಂಗ್ ರಾಠೋಡ್, ಉಷಾ ದಾಸರ, ಸ್ವಾತಿ ಅಕ್ಕಿ, ನಿರ್ಮಲಾ ಕೊಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

“ಗದಗ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭೀಕರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ಬಿತ್ತನೆ ಮಾಡಿದರೂ ಮೊಳಕೆ ಬರುತ್ತಿಲ್ಲ. ರೈತರ ರಕ್ಷಣೆಗೆ ಸರ್ಕಾರ ತಕ್ಷಣ ಧಾವಿಸಬೇಕು. ಪ್ರಧಾನಿಗೆ ಪತ್ರ ಬರೆದು ಕೈಕಟ್ಟಿ ಕುಳಿತರೆ ರೈತರ ಕಣ್ಣೀರು ಒರೆಸಲು ಸಾಧ್ಯವಿಲ್ಲ.”

– ಬಿ.ವೈ. ವಿಜಯೇಂದ್ರ, ರಾಜ್ಯಾಧ್ಯಕ್ಷ, ಬಿಜೆಪಿ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img