ಚಿತ್ರದುರ್ಗ: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮತ್ತೆ ಆತಂಕ ಮೂಡಿಸಿದೆ.
ಪ್ರತ್ಯೇಕ ಎರಡು ಘಟನೆಗಳಲ್ಲಿ ನಾಲ್ವರು ಪುಟ್ಟ ಮಕ್ಕಳು ಬೀದಿ ನಾಯಿಗಳ ದಾಳಿಗೆ ಒಳಗಾಗಿ ಗಾಯಗೊಂಡಿದ್ದಾರೆ.
ನಗರದ ಚೇಳಗುಡ್ಡ ಹಾಗೂ ನೆಹರು ನಗರ ಬಡಾವಣೆಯಲ್ಲಿ ಈ ಘಟನೆಗಳು ನಡೆದಿವೆ. ಮನೆ ಮುಂದೆ ಆಟವಾಡುತ್ತಿದ್ದ 5ರಿಂದ 6 ವರ್ಷದ ಮಕ್ಕಳ ಮೇಲೆ ಏಕಾಏಕಿ ಬೀದಿ ನಾಯಿಗಳು ದಾಳಿ ನಡೆಸಿವೆ.
ನಾಯಿಗಳ ದಾಳಿಯಿಂದ ಮಕ್ಕಳ ಮುಖ, ಕೈ, ಕಾಲು ಸೇರಿದಂತೆ ದೇಹದ ಹಲವು ಭಾಗಗಳಿಗೆ ಗಾಯಗಳಾಗಿವೆ. ಗಾಯಗೊಂಡ ಆಲೀನಾ, ಆದಿಲ್, ಮನ್ವಿತ್ ಹಾಗೂ ಮತ್ತೋರ್ವ ಬಾಲಕನಿಗೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.
ನಗರಸಭೆ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ಕರೆತಂದಾಗ ನಾಯಿ ಕಡಿತಕ್ಕೆ ನೀಡುವ ಅಗತ್ಯ ಇಂಜೆಕ್ಷನ್ ಕೂಡ ತಕ್ಷಣ ಲಭ್ಯವಾಗಲಿಲ್ಲ ಎಂದು ಪೋಷಕರು ದೂರಿದ್ದಾರೆ.



