ಬೆಂಗಳೂರು: ಮನೆಗಳವು ಮಾಡಿ, ಕದ್ದ ಚಿನ್ನಾಭರಣವನ್ನು ಚೆನ್ನೈನಲ್ಲಿ ಅಡವಿಟ್ಟು ಪರಾರಿಯಾಗಿದ್ದ ರಾಜಸ್ಥಾನ ಮೂಲದ ಗ್ಯಾಂಗ್ನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕರ್ಣರಾಮ್, ಲಕ್ಮರಾಮ್ ಮತ್ತು ಗೋಪಾಲ್ ಎಂದು ಗುರುತಿಸಲಾಗಿದೆ. ಆರೋಪಿಗಳು ಮುದ್ದಿನಪಾಳ್ಯದ ರಾಕೇಶ್ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಿದ್ದರು ಎನ್ನಲಾಗಿದೆ.
ಕಳ್ಳತನದ ಬಳಿಕ ಬೆಂಗಳೂರಿನಿಂದ ಪರಾರಿಯಾಗಿದ್ದ ಆರೋಪಿಗಳು, ಕದ್ದ ಚಿನ್ನಾಭರಣವನ್ನು ಚೆನ್ನೈನಲ್ಲಿ ಅಡವಿಟ್ಟಿದ್ದರು ಎಂದು ತಿಳಿದುಬಂದಿದೆ. ಬಳಿಕ ರಾಜಸ್ಥಾನಕ್ಕೆ ತೆರಳಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ.
ಬಂಧಿತರಿಂದ 187 ಗ್ರಾಂ ಚಿನ್ನಾಭರಣ ಹಾಗೂ 4 ಲಕ್ಷ ರೂಪಾಯಿ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.



