ವಿಜಯಸಾಕ್ಷಿ ಸುದ್ದಿ, ಗದಗ: ಅಮ್ಮ ಫೌಂಡೇಶನ್ನ ಮಾರ್ಗದರ್ಶಕರೂ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗದಗ ಜಿಲ್ಲಾ ಅಧ್ಯಕ್ಷರೂ ಆಗಿರುವ ಡಾ. ಬಸವರಾಜ್ ಬಳ್ಳಾರಿ ಅವರ 49ನೇ ಜನ್ಮದಿನದ ಅಂಗವಾಗಿ ಅಮ್ಮ ಫೌಂಡೇಶನ್ ವತಿಯಿಂದ ಜುಲೈ 23ರಂದು ಗದಗ ಜಿಲ್ಲೆಯಲ್ಲಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕಿನ ಆಯ್ದ ಸರ್ಕಾರಿ ಶಾಲೆಗಳ ಸುಮಾರು 1,000 ಬಡ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ನೋಟ್ಬುಕ್ ಹಾಗೂ ಪೆನ್ಗಳನ್ನು ವಿತರಿಸಲಾಗುತ್ತದೆ. ಅಲ್ಲದೆ, ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಗಳ ಕಿಟ್ ವಿತರಣೆ ಹಾಗೂ ‘ಹಸಿರೇ ಉಸಿರು’ ಧ್ಯೇಯದಡಿ 500 ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಗಿದೆ.
ಅದೇ ದಿನ ಗದಗದ ನೌಕರರ ಭವನದಲ್ಲಿ ರಕ್ತದಾನ ಶಿಬಿರ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಈ ಕುರಿತು ಅಮ್ಮ ಫೌಂಡೇಶನ್ ಅಧ್ಯಕ್ಷ ಹಾಗೂ ವಕೀಲ ಮೈಲಾರಪ್ಪ ಡಿ.ಎಚ್. ಮಾತನಾಡಿ, ಅಮ್ಮ ಫೌಂಡೇಶನ್ ಸಮಾಜಮುಖಿ ಕಾರ್ಯಗಳಿಗೆ ನಿರಂತರ ಆದ್ಯತೆ ನೀಡುತ್ತಿದ್ದು, ಈ ಬಾರಿ ಸರ್ಕಾರಿ ಶಾಲೆಗಳ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ಶೈಕ್ಷಣಿಕ ನೆರವಿಗೆ ವಿಶೇಷ ಒತ್ತು ನೀಡಲಾಗಿದೆ. ವಿದ್ಯಾರ್ಥಿಗಳ ಆರ್ಥಿಕ ಹೊರೆ ಕಡಿಮೆ ಮಾಡಿ, ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ಡಾ. ಬಸವರಾಜ್ ಬಳ್ಳಾರಿ ಅವರ ಜನ್ಮದಿನವನ್ನು ಸೇವಾ ಕಾರ್ಯಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, ಮುಂದೆಯೂ ಸಮಾಜಮುಖಿ ಕಾರ್ಯಕ್ರಮಗಳನ್ನು ಮತ್ತಷ್ಟು ವಿಸ್ತರಿಸಲು ಮಾರ್ಗದರ್ಶಕರ ಮಾರ್ಗದರ್ಶನ ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಅಮ್ಮ ಫೌಂಡೇಶನ್ ಪದಾಧಿಕಾರಿಗಳು ತಿಳಿಸಿದ್ದಾರೆ.



