HomeKarnataka Newsಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಮೋದಿ ಮೊದಲೇ ಮಾತನಾಡಬೇಕಿತ್ತು: ಸಿಎಂ ಡಿ.ಕೆ. ಶಿವಕುಮಾರ್ ಕಿಡಿ

ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಮೋದಿ ಮೊದಲೇ ಮಾತನಾಡಬೇಕಿತ್ತು: ಸಿಎಂ ಡಿ.ಕೆ. ಶಿವಕುಮಾರ್ ಕಿಡಿ

For Dai;y Updates Join Our whatsapp Group

ಬೆಂಗಳೂರು: ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ಈಗ ಮಾತನಾಡುವ ಬದಲು ಪ್ರಾರಂಭದಲ್ಲೇ ಮಾತನಾಡಬೇಕಿತ್ತು. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಯಾರನ್ನೂ ಕಾಪಾಡುವ ಪ್ರಶ್ನೆಯೇ ಕೇಂದ್ರ ಸರ್ಕಾರದ ಮುಂದಿರಬಾರದು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಆಗ್ರಹಿಸಿದರು. ಬೆಂಗಳೂರಿನ ಕೆ ಜಿ ರಸ್ತೆ ಬಳಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು.

“ಬಿಜೆಪಿಯವರೇ ನಿಮ್ಮ ಮಕ್ಕಳೂ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ದೇಶದ ಯುವ ಜನತೆಯ ಭವಿಷ್ಯ ಹಾಳಾಗುತ್ತಿದೆ. ವೈಫಲ್ಯವನ್ನು ಬಿಜೆಪಿಯವರು ಒಪ್ಪಿಕೊಳ್ಳಬೇಕು. ಒಬ್ಬ ವ್ಯಕ್ತಿ ರಾಜಿನಾಮೆ ಕೊಡುವುದರಿಂದ ಏನಾಗಲಿದೆ? ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದಾಗ ಇಂತಹ ಘಟನೆ ಬಗ್ಗೆ ಯಾರಾದರೂ ಜವಾಬ್ದಾರಿ ಹೊರಬೇಕಲ್ಲವೇ? ಇದಕ್ಕೆ ಯಾರು ಹೊಣೆ?” ಎಂದು ಕಿಡಿಕಾರಿದರು.

“ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲವೂ ಚರ್ಚೆಯಾಗಬೇಕು. ಟೀಕೆ ಮಾಡಿದಾಗ ನಾವು ಹಾಗೂ ನೀವು ಇಬ್ಬರೂ ಒಪ್ಪಿ ತಿದ್ದಿಕೊಳ್ಳಬೇಕು. ನಾವು ಯುವಕರ ಭವಿಷ್ಯದ ಬಗ್ಗೆ ಆಲೋಚನೆ ಮಾಡುತ್ತಿದ್ದೇವೆ. ಈಗಾಗಲೇ ಸುಮಾರು 100 ಕ್ಕೂ ಹೆಚ್ಚು ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ” ಎಂದರು.

ಪ್ರಶ್ನೆ ಪತ್ರಿಕೆ ಸೋರಿಕೆ ರಾಜಕೀಯ ವಿಚಾರವಲ್ಲ

“ಪ್ರಶ್ನೆ ಪತ್ರಿಕೆ ಸೋರಿಕೆ ಎಂಬುದು ರಾಜಕೀಯ ಪಕ್ಷಗಳ ವಿಚಾರವಲ್ಲ, ದೇಶದ ಭವಿಷ್ಯದ ವಿಚಾರ. ಪಾರದರ್ಶಕ, ಶಕ್ತಿಯುತ, ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಯಾವುದೇ ಪರೀಕ್ಷೆಗಳು ನಡೆದರು ಅವು ಪಾರದರ್ಶಕವಾಗಿರಬೇಕು. ಇಡೀ ಪ್ರಪಂಚ ಭಾರತದ ಯುವ ಜನತೆಯ ಭವಿಷ್ಯದ ಬಗ್ಗೆ ಆಲೋಚನೆ ಮಾಡುತ್ತಿದೆ. ನಮ್ಮ ದೇಶ ಪ್ರತಿಭಾವಂತರ ದೇಶ. ಇಡೀ ಪ್ರಪಂಚದಲ್ಲಿಯೇ ನಮ್ಮಲ್ಲಿ ಇರುವಷ್ಟು ಪ್ರತಿಭೆಗಳು ಎಲ್ಲಿಯೂ ಇಲ್ಲ ಎಂದು ಅನೇಕರು ಒಪ್ಪಿಕೊಂಡಿದ್ದಾರೆ. ನಮ್ಮನ್ನು ಇಡೀ ಪ್ರಪಂಚವೇ ನೋಡುತ್ತಿರುವ ಹೊತ್ತಿನಲ್ಲಿ ನಮ್ಮ ಶಿಕ್ಷಣದ ಗುಣಮಟ್ಟವನ್ನು ನಾವು ಕಾಪಾಡಬೇಕಿದೆ” ಎಂದರು.

ಮಾಧ್ಯಮಗಳು ಪ್ರಶ್ನೆ ಮಾಡಬೇಕಿತ್ತು

“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವುದು ಪ್ರತಿಪಕ್ಷಗಳ, ಎಲ್ಲರ, ಯುಜನತೆಯ ಹಕ್ಕು. ಇಂತಹ ಸಂದರ್ಭದಲ್ಲಿ ಅವರ ಮೇಲೆ ಲಾಠಿಚಾರ್ಜ್ ಮಾಡಲಾಗಿದೆ, ತೊಂದರೆ ನೀಡಲಾಗಿದೆ. ಸುದ್ದಿ ಮಾಧ್ಯಮಗಳ ಮೇಲೆ ನಿರ್ಬಂದ ಹೇರಿ, ಧಮ್ಕಿ ಹಾಕಿ ಪ್ರಸಾರ ಆಗದಂತೆ ನೋಡಿಕೊಳ್ಳಲಾಗಿದೆ. ಅಲ್ಲಿದ್ದವರು ಮಾಡಿದ ವಿಡಿಯೋಗಳು ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಮಾಧ್ಯಮಗಳು ಪ್ರಜಾಪ್ರಭುತ್ವದ ಅಂಗ. ಹೀಗಿದ್ದಾಗ ಮಾಧ್ಯಮಗಳು ಪ್ರಶ್ನೆ ಮಾಡದೇ ಏನು ಮಾಡುತ್ತಿದ್ದವು. ನೀವುಗಳು ಏಕೆ ಪ್ರತಿಭಟನೆ ಮಾಡಲಿಲ್ಲ. ಪ್ರಶ್ನೆ ಮಾಡದ ನಿಮ್ಮಗಳ ತಪ್ಪೂ ಇದೇ. ಸಾಮಾಜಿಕ ಜಾಲತಾಣದಲ್ಲಿ ಬಂದ ಮೇಲೆ ಮಾಧ್ಯಮಗಳು ವಿಷಯಗಳನ್ನು ಎತ್ತಿಕೊಂಡಿವೆ. ಇದು ಹೊಸ ತಲೆಮಾರಿನ ಹೋರಾಟ” ಎಂದರು.

ಮೊಟ್ಟೆ ಹೊಡೆದಿದ್ದು ಸರಿಯಲ್ಲ

“ನಾವೂ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟನೆ ಮಾಡಿದ್ದೇವೆ. ಮಂಗಳವಾರದಂದು ಕಾಂಗ್ರೆಸ್ ಕಚೇರಿ ಬಳಿ ಮೊಟ್ಟೆ ಹೊಡೆದಿದ್ದನ್ನು ಸರಿ ಎಂದು ಹೇಳುವುದಿಲ್ಲ. ಕಾನೂನಿನ ಪ್ರಕಾರ ಯಾವ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನಮ್ಮ ಗೃಹಸಚಿವರು ಈಗಾಗಲೇ ತಿಳಿಸಿದ್ದಾರೆ. ಬಿಜೆಪಿಯವರು ಹಿಂದೆ ಏನೇನು ಮಾಡಿದ್ದರು ಎಂದು ಅವರೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಲಾಠಿ, ಮಚ್ಚು, ರೈಫಲ್ ಗಳು ಸಿಕ್ಕಿದ್ದವು. ಪೊನ್ನಂಪೇಟೆಯ ಶಾಲೆಯ ಆವರಣದಲ್ಲಿ ರೈಫಲ್ ತರಭೇತಿ ನೀಡಿದ್ದರು. ನಿಮ್ಮದೂ ಇತಿಹಾಸಗಳಿವೆ” ಎಂದರು.

ರಾಜ್ಯದಲ್ಲಿ ಕೊತ್ವಾಲ್ ಆಡಳಿತ ನಡೆಯುತ್ತಿದೆ ಎನ್ನುವ ಬಿಜೆಪಿ ಹೇಳಿಕೆ ಬಗ್ಗೆ ಕೇಳಿದಾಗ, “ಅವರ ಖುಷಿಗೆ ಏನು ಬೇಕಾದರೂ, ಹೆಂಗೆ ಬೇಕಾದರೂ ಮಾತನಾಡಿಕೊಳ್ಳಲಿ. ನಾನು ಈ ಸ್ಥಾನಕ್ಕೆ ಬರಲು ವಿದ್ಯಾರ್ಥಿ ನಾಯಕನಾಗಿ ಬೆಳೆದವನು. ಹಳ್ಳಿಯಲ್ಲಿ ಹುಟ್ಟಿದ ನಾನು ಪರಿಶುದ್ಧವಾದ ರಾಜಕಾರಣ, ಆಡಳಿತ ಮಾಡುತ್ತಿದ್ದೇನೆ. ಇದನ್ನು ಅವರ ಕೈಯಲ್ಲಿ ತಡೆದುಕೊಳ್ಳಲು ಆಗುತ್ತಿಲ್ಲ ಎಂದರೆ ಏನು ಮಾಡಲು ಆಗುವುದಿಲ್ಲ” ಎಂದು ವ್ಯಂಗ್ಯವಾಡಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img