ಬೆಂಗಳೂರು: ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ 224 ವಿಧಾನಸಭಾ ಕ್ಷೇತ್ರಗಳಿಗೆ ₹224 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಕುಡಿಯುವ ನೀರಿನ ಪೂರೈಕೆಗೆ ಯಾವುದೇ ಹಣಕಾಸಿನ ಕೊರತೆಯಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ವಿಭಾಗೀಯ ಮಟ್ಟದ ಪ್ರಕೃತಿ ವಿಕೋಪ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗಿದೆ ಎಂದು ಹೇಳಿದರು.
ಈ ಹಿಂದೆ ಕುಡಿಯುವ ನೀರಿಗಾಗಿ ₹117 ಕೋಟಿ ಬಿಡುಗಡೆ ಮಾಡಲಾಗಿತ್ತು. ಇದೀಗ 224 ಕ್ಷೇತ್ರಗಳಿಗೆ ₹224 ಕೋಟಿ ಅನುದಾನ ನೀಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಅಗತ್ಯವಿದ್ದರೆ ಖಾಸಗಿ ಬಾವಿ, ಕೊಳವೆಬಾವಿಗಳ ಮೂಲಕ ನೀರು ಪೂರೈಸಬೇಕು. ಅದೂ ಸಾಧ್ಯವಾಗದಿದ್ದರೆ ಹೊಸ ಬೋರ್ವೆಲ್ ಕೊರೆಸಿ ನೀರು ಒದಗಿಸಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.
ರೈತರ ಹೊಲ-ಗದ್ದೆಗಳಿಗೆ ಭೇಟಿ ನೀಡಿದ ವೇಳೆ ಅನೇಕ ಬೆಳೆಗಳು ಹಾನಿಗೊಳಗಾಗಿರುವುದು ಮತ್ತು ನೀರಿನ ಸಮಸ್ಯೆ ತೀವ್ರವಾಗಿರುವುದು ಕಂಡುಬಂದಿದೆ. ಆದ್ದರಿಂದ ಬರ ನಿರ್ವಹಣೆಗೆ ಮೊದಲ ಆದ್ಯತೆ ನೀಡಲಾಗಿದ್ದು, ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳದಂತೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದರು.
ಗ್ರಾಮೀಣಾಭಿವೃದ್ಧಿ ಇಲಾಖೆಗೆ ಬರಬೇಕಿರುವ ₹2,186 ಕೋಟಿ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಇದರಿಂದ 5,900 ಗ್ರಾಮ ಪಂಚಾಯಿತಿಗಳು ಹಣಕಾಸಿನ ಕೊರತೆ ಎದುರಿಸುತ್ತಿವೆ. ಈ ಕುರಿತು ಈಗಾಗಲೇ ಕೇಂದ್ರದ ಹಲವು ಸಚಿವರನ್ನು ಭೇಟಿ ಮಾಡಿದ್ದು, ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ 15ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಲಿದ್ದೇನೆ ಎಂದು ಹೇಳಿದರು.
ಬಿಜೆಪಿ ನಡೆಸುತ್ತಿರುವ ಬರ ಅಧ್ಯಯನ ಕುರಿತು ಪ್ರತಿಕ್ರಿಯಿಸಿದ ಈಶ್ವರ್ ಖಂಡ್ರೆ, ಬಿಜೆಪಿಗೆ ಬರ, ಶಿಕ್ಷಣ ಅಥವಾ ಯುವಕರ ಸಮಸ್ಯೆಗಳ ಬಗ್ಗೆ ಕಾಳಜಿ ಇಲ್ಲ. ಅವರಿಗೆ ಅಧಿಕಾರಕ್ಕೆ ಬರುವ ಆತುರ ಮಾತ್ರ ಇದೆ ಎಂದು ಟೀಕಿಸಿದರು.
“ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚಿನ ಅನುದಾನ ತರಲಿ. ಮಹದಾಯಿ ಹಾಗೂ ಕಳಸ-ಬಂಡೂರಿ ಯೋಜನೆಗಳ ವಿಚಾರದಲ್ಲಿ ಬಿಜೆಪಿ ಏನು ಮಾಡಿದೆ ಎಂಬುದನ್ನು ಮೊದಲು ಹೇಳಲಿ” ಎಂದು ಪ್ರಶ್ನಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಮತ್ತೆ ಚುನಾವಣೆಗೆ ಸ್ಪರ್ಧಿಸಿ ಪಕ್ಷಕ್ಕೆ ಮಾರ್ಗದರ್ಶನ ನೀಡಬೇಕು ಎಂದು ಮನವಿ ಮಾಡಿದರು.



