ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳಿಗೆ ಉತ್ತಮ ಆರೋಗ್ಯ, ಗುಣಮಟ್ಟದ ಶಿಕ್ಷಣ ಹಾಗೂ ಸಂಸ್ಕಾರಯುತ ಬದುಕು ಕಲ್ಪಿಸುವುದೇ ಸಮಾಜದ ಉಜ್ವಲ ಭವಿಷ್ಯಕ್ಕೆ ಅಡಿಪಾಯವಾಗಿದೆ ಎಂದು ಡಾ. ಕಬಾಡಿ’ಸ್ ಶ್ರೀ ಸಾಯಿ ಹನುಮಾನ್ ಫೌಂಡೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ.) ಅಧ್ಯಕ್ಷ ಡಾ. ಪಾಂಡುರಂಗಸಾ ಹ. ಕಬಾಡಿ ಹೇಳಿದರು.
ನಗರದ ಕಳಸಾಪುರ ರಸ್ತೆಯ ಶ್ರೀ ಸಾಯಿ ಬಾಪೂಜಿ ನಗರದಲ್ಲಿರುವ ಶ್ರೀ ಸಾಯಿ ಹನುಮಾನ್ ಆರೋಗ್ಯ ದಾಸೋಹ ಕೇಂದ್ರದಲ್ಲಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಉಚಿತ ಮಕ್ಕಳ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಅನ್ನದಿಂದ ಆರೋಗ್ಯ, ಆರೋಗ್ಯದಿಂದ ಶಿಕ್ಷಣ, ಶಿಕ್ಷಣದಿಂದ ಜ್ಞಾನ ಹಾಗೂ ಆ ಜ್ಞಾನದ ಮೂಲಕ ದೇಶಸೇವೆ ಎಂಬ ಪಂಚದಾಸೋಹದ ಆಶಯವನ್ನು ಟ್ರಸ್ಟ್ ಹೊಂದಿದ್ದು, ಅದನ್ನು ಸಾಕಾರಗೊಳಿಸಲು ಸಮಾಜದ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.
ಶಿಬಿರದಲ್ಲಿ ಸುಮಾರು 75 ಮಕ್ಕಳ ಆರೋಗ್ಯ ತಪಾಸಣೆ ನಡೆಸಿ, ಅಗತ್ಯವಿರುವವರಿಗೆ ಉಚಿತ ಔಷಧಿಗಳನ್ನು ವಿತರಿಸಲಾಯಿತು. ಅಲ್ಲದೆ 51 ಅಪೌಷ್ಟಿಕ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ನೀಡಲಾಯಿತು.
ಮಕ್ಕಳ ತಜ್ಞ ಡಾ. ಈರಣ್ಣ ಹಳೆಮನಿ ಮಾತನಾಡಿ, ಮಕ್ಕಳ ಆರೋಗ್ಯದಲ್ಲಿನ ನ್ಯೂನತೆಗಳನ್ನು ಆರಂಭದಲ್ಲಿಯೇ ಪತ್ತೆಹಚ್ಚಿದರೆ ಪರಿಣಾಮಕಾರಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಪೌಷ್ಟಿಕ ಆಹಾರದ ಕೊರತೆಯೇ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವುದರಿಂದ ಪೋಷಕರು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದರು. ಇಂತಹ ಜನೋಪಯೋಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಟ್ರಸ್ಟ್‌ನ ಕಾರ್ಯವನ್ನು ಅವರು ಶ್ಲಾಘಿಸಿದರು.
ಅತಿಥಿಯಾಗಿ ಭಾಗವಹಿಸಿದ್ದ ಕಲಾವತಿ ಆನಂದ ಅಲ್ಬೂರ್, ಮಕ್ಕಳಿಗೆ ಮನೆಯಲ್ಲೇ ತಯಾರಿಸಿದ ಪೌಷ್ಟಿಕ ಆಹಾರವನ್ನೇ ನೀಡಬೇಕು. ಹೊರಗಿನ ಜಂಕ್ ಫುಡ್ ಹಾಗೂ ಪ್ಯಾಕೆಟ್ ಆಹಾರಗಳಿಂದ ಸಾಧ್ಯವಾದಷ್ಟು ದೂರವಿಡಬೇಕು ಎಂದು ಪೋಷಕರಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಎಸ್‌ಕೆ ಪಂಚ್ ಟ್ರಸ್ಟ್ ಕಮಿಟಿ ಅಧ್ಯಕ್ಷ ಫಕ್ಕೀರಸಾ ಬಾಬಾಸಾ ಭಾಂಡಗೆ ಮಾತನಾಡಿ, ಮಕ್ಕಳನ್ನು ಮೊಬೈಲ್ ವ್ಯಸನದಿಂದ ದೂರವಿಟ್ಟು ಉತ್ತಮ ಸಂಸ್ಕಾರ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಬೆಳೆಸುವುದು ಪೋಷಕರ ಹೊಣೆಗಾರಿಕೆಯಾಗಿದೆ ಎಂದರು.
ವೇದಿಕೆಯಲ್ಲಿ ರತ್ನಾ ಬಸಪ್ಪ ಯಳಮಲಿ ಹಾಗೂ ದುರ್ಗೇಶ್ ವಿಭೂತಿ ಉಪಸ್ಥಿತರಿದ್ದರು.
ಫಾರ್ಮಸಿಸ್ಟ್ ದೀಪಕ್ ಖಟವಟೆ ವೈದ್ಯರು ಸೂಚಿಸಿದ ಔಷಧಿಗಳನ್ನು ಮಕ್ಕಳಿಗೆ ವಿತರಿಸಿದರು. ಡಾ. ದಯಾನಂದ ಕಬಾಡಿ, ಡಾ. ಸೂರಜ್ ಕಾಟಿಗೇರ ಹಾಗೂ ಲ್ಯಾಬ್ ಟೆಕ್ನಿಷಿಯನ್ ಪ್ರಕಾಶ್ ಬಿದರಿ ಶಿಬಿರದಲ್ಲಿ ಸೇವೆ ಸಲ್ಲಿಸಿದರು. ಅನ್ನಪೂರ್ಣಾ ಹಬೀಬ್, ಅಂಗನವಾಡಿ ಕಾರ್ಯಕರ್ತೆಯರಾದ ರಮೀಜಾ ಸೋಲಾಪುರ, ದೀಪಾ ವಿಭೂತಿ, ವೀಣಾ ಗಣಚಾರ ಹಾಗೂ ಆಶಾ ಕಾರ್ಯಕರ್ತೆ ಭಾರತಿ ಬಾರಕೇರ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಟ್ರಸ್ಟ್‌ನ ಟ್ರಸ್ಟಿ ಸ್ನೇಹಲತಾ ಕಬಾಡಿ ಮನೆಯಲ್ಲಿಯೇ ಪೌಷ್ಟಿಕ ಆಹಾರ ತಯಾರಿಸುವ ಕುರಿತು ಮಾಹಿತಿ ನೀಡಿ, ಕಾರ್ಯಕ್ರಮಕ್ಕೆ ಸಹಕರಿಸಿದ ವೈದ್ಯರು, ಅತಿಥಿಗಳು, ಸಿಬ್ಬಂದಿ, ತಾಯಂದಿರು ಹಾಗೂ ಮಕ್ಕಳಿಗೆ ಕೃತಜ್ಞತೆ ಸಲ್ಲಿಸಿದರು.
“ಅನ್ನದಿಂದ ಆರೋಗ್ಯ, ಆರೋಗ್ಯದಿಂದ ಶಿಕ್ಷಣ, ಶಿಕ್ಷಣದಿಂದ ಜ್ಞಾನ ಮತ್ತು ಜ್ಞಾನದಿಂದ ದೇಶಸೇವೆ ಎಂಬುದು ನಮ್ಮ ಪಂಚದಾಸೋಹದ ಪರಿಕಲ್ಪನೆ.”
– ಡಾ. ಪಾಂಡುರಂಗಸಾ ಹ. ಕಬಾಡಿ



