HomeGadag Newsಧರ್ಮ ಪಾಲನೆಯಿಂದಲೇ ಜೀವನಕ್ಕೆ ಶಾಂತಿ, ಸಮೃದ್ಧಿ: ರಂಭಾಪುರಿ ಶ್ರೀ

ಧರ್ಮ ಪಾಲನೆಯಿಂದಲೇ ಜೀವನಕ್ಕೆ ಶಾಂತಿ, ಸಮೃದ್ಧಿ: ರಂಭಾಪುರಿ ಶ್ರೀ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ರೋಣ: ಮನುಷ್ಯನ ಆದರ್ಶ ಬದುಕಿಗೆ ಉತ್ತಮ ಚಿಂತನೆಗಳು ಅಗತ್ಯವಾಗಿದ್ದು, ಜೀವನದ ಉನ್ನತಿ, ಸಮೃದ್ಧಿ ಹಾಗೂ ಶಾಂತಿಗಾಗಿ ಧರ್ಮ ಪಾಲನೆ ಅತ್ಯಂತ ಮುಖ್ಯ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ರೋಣ ತಾಲೂಕಿನ ಕೌಜಗೇರಿ ಗ್ರಾಮದಲ್ಲಿ ಶ್ರೀಮದ್ ರಂಭಾಪುರಿ ಶಾಖಾ ಹಿರೇಮಠದ ನೂತನ ಮಠದ ಉದ್ಘಾಟನೆ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂಗಲಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ನಡೆದ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ದೇಹವು ದೇವರ ದೇಗುಲವಾಗಿದ್ದು, ಸತ್ಯ, ಶಾಂತಿ ಸೇರಿದಂತೆ ದೈವೀ ಗುಣಗಳನ್ನು ಬೆಳೆಸಿಕೊಳ್ಳಬೇಕು. ಮನಸ್ಸಿನಲ್ಲಿರುವ ಅಸುರೀ ಗುಣಗಳನ್ನು ತೊರೆದು ಪರಿಶುದ್ಧ ಬದುಕು ನಡೆಸಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಅಧರ್ಮಕ್ಕೆ ಹಲವು ದಾರಿಗಳಿದ್ದರೂ ಧರ್ಮದ ಮಾರ್ಗ ಒಂದೇ. ಶ್ರೀ ಜಗದ್ಗುರು ರೇಣುಕಾಚಾರ್ಯರು ‘ಸಿದ್ಧಾಂತ ಶಿಖಾಮಣಿ’ಯಲ್ಲಿ ಬೋಧಿಸಿದ ಜೀವನ ಮೌಲ್ಯಗಳು ಹಾಗೂ ಅಹಿಂಸಾದಿ ದಶಧರ್ಮ ಸೂತ್ರಗಳು ಇಂದಿಗೂ ಜೀವನ ವಿಕಾಸಕ್ಕೆ ದಾರಿದೀಪವಾಗಿವೆ ಎಂದು ಅವರು ತಿಳಿಸಿದರು.

ಕೌಜಗೇರಿ ಹಿರೇಮಠವು ರಂಭಾಪುರಿ ಪೀಠದ ಶಾಖಾಮಠವಾಗಿದ್ದು, ನೂತನ ಮಠ ನಿರ್ಮಿಸಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಮಂಗಲಮೂರ್ತಿ ಪ್ರತಿಷ್ಠಾಪಿಸಿರುವುದು ಸಂತಸದ ಸಂಗತಿಯಾಗಿದೆ. ಇದಕ್ಕಾಗಿ ಶ್ರಮಿಸಿದ ಸದ್ಭಕ್ತರಿಗೆ ಅಭಿನಂದನೆ ಸಲ್ಲಿಸಿದರು.

ಸಮಾರಂಭದ ನೇತೃತ್ವ ವಹಿಸಿದ್ದ ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಣತೆ ಬೆಳಗುತ್ತದೆ, ಉರಿಯುವುದಿಲ್ಲ; ಆದರೆ ಮನುಷ್ಯ ಉರಿಯುತ್ತಿದ್ದಾನೆ, ಬೆಳಗುತ್ತಿಲ್ಲ. ಯಾವುದೇ ಕೆಲಸವನ್ನು ಶುದ್ಧ ಮನಸ್ಸಿನಿಂದ ಮಾಡಿದಾಗ ಅದರ ಫಲ ದೊಡ್ಡದಾಗುತ್ತದೆ. ಮುರಿಯುವುದಕ್ಕಿಂತ ಜೋಡಿಸುವುದು, ಕೆಡವುವುದಕ್ಕಿಂತ ಕಟ್ಟುವುದು ಸಮಾಜದ ಸೌಹಾರ್ದಕ್ಕೆ ಅಗತ್ಯ ಎಂದರು.

ಬೆನಹಾಳ ಹಿರೇಮಠದ ಸದಾಶಿವ ಮಹಾಂತ ಶಿವಾಚಾರ್ಯ ಸ್ವಾಮೀಜಿ ಪ್ರಾತಃಕಾಲದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಮೂರ್ತಿ ಪ್ರತಿಷ್ಠಾಪನೆ ವಿಧಿವಿಧಾನಗಳನ್ನು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಯಲಬುರ್ಗಾ ಶ್ರೀಧರಮುರಡಿ ಹಿರೇಮಠದ ಬಸವೇಶ್ವರ ಶಿವಾಚಾರ್ಯರು, ನರಗುಂದ ಪತ್ರಿವನಮಠದ ಡಾ. ಗುರುಸಿದ್ಧವೀರ ಶಿವಾಚಾರ್ಯರು, ರಾಜೂರ-ಅಡ್ನೂರಿನ ಅಭಿನವ ಪಂಚಾಕ್ಷರ ಶಿವಾಚಾರ್ಯರು, ಅಸೂಟಿ ಹಿರೇಮಠದ ರೇವಣಸಿದ್ಧಯ್ಯ ಸ್ವಾಮೀಜಿ, ಜಗದೀಶಯ್ಯ ಹಿರೇಮಠ ಹಾಗೂ ಸಿದ್ಧಲಿಂಗಯ್ಯ ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶಶಿಧರ ಭಿಕ್ಷಾವರ್ತಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರೇಶ ವಾಲಿ ಸ್ವಾಗತಿಸಿದರು. ರಾಜೇಶ್ವರಿ ಮತ್ತು ಸೌಜನ್ಯ ಹಿರೇಮಠ ಪ್ರಾರ್ಥನೆ ನೆರವೇರಿಸಿದರು. ಪ್ರವೀಣ ಔದಕ್ಕನವರ ಕಾರ್ಯಕ್ರಮ ನಿರೂಪಿಸಿದರು.

ಇದಕ್ಕೂ ಮುನ್ನ ಗ್ರಾಮದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ವೈಭವದಿಂದ ಜರುಗಿತು. ಬಳಿಕ ಅನ್ನದಾಸೋಹ ನಡೆಯಿತು. ಗ್ರಾಮದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

“ಜೀವನದ ಸಮೃದ್ಧಿ ಮತ್ತು ಶಾಂತಿಗೆ ಧರ್ಮ ಪಾಲನೆ ಅತ್ಯಗತ್ಯ. ಮನುಷ್ಯನ ಆದರ್ಶ ಬದುಕಿಗೆ ಉತ್ತಮ ಚಿಂತನೆಗಳೇ ಅಡಿಪಾಯ.”

– ಡಾ. ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ, ಶ್ರೀ ರಂಭಾಪುರಿ ಪೀಠ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img