ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಂಡೇರ್‌ಬಾಲ್ ಜಿಲ್ಲೆಯ ಕಂಗನ್ ಪ್ರದೇಶದ ಹರಿಗನ್ವಾನ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಅಮರನಾಥ ಯಾತ್ರೆ ಮುಗಿಸಿ ಹಿಂದಿರುಗುತ್ತಿದ್ದ ಬಸ್ ಅಪಘಾತಕ್ಕೀಡಾಗಿ 39 ಯಾತ್ರಿಕರು ಗಾಯಗೊಂಡಿದ್ದಾರೆ.
ಬಾಬಾ ಬರ್ಫಾನಿ ದರ್ಶನ ಪಡೆದು ವಾಪಸ್ ಆಗುತ್ತಿದ್ದ ಯಾತ್ರಿಕರಿದ್ದ ಬಸ್, ಹರಿಗನ್ವಾನ್ ಬಳಿಯ ತೀಕ್ಷ್ಣ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಖಾಲಿ ಮನೆಗೆ ಡಿಕ್ಕಿ ಹೊಡೆದಿದೆ.
ಅಪಘಾತದ ವೇಳೆ ಬಸ್ ಸಿಂಧ್ ನದಿಗೆ ಬೀಳುವ ಅಪಾಯದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದೆ. ಬಸ್ ನದಿಗೆ ಉರುಳಿದ್ದರೆ ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಅಪಘಾತಕ್ಕೀಡಾದ ಸ್ಥಳದಲ್ಲಿದ್ದ ಮನೆಯೊಳಗೆ ಯಾರೂ ಇಲ್ಲದ ಕಾರಣ ಹೆಚ್ಚಿನ ಹಾನಿ ಸಂಭವಿಸಿಲ್ಲ.
ಘಟನೆ ಮಾಹಿತಿ ತಿಳಿದ ತಕ್ಷಣ ಸ್ಥಳೀಯರು, ಜಮ್ಮು-ಕಾಶ್ಮೀರ ಪೊಲೀಸರು, ಐಟಿಬಿಪಿ, ಸಿಆರ್‌ಪಿಎಫ್ ಹಾಗೂ ಭಾರತೀಯ ಸೇನೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.
ಗಾಯಗೊಂಡ ಯಾತ್ರಿಕರನ್ನು ಸಮೀಪದ ಆಸ್ಪತ್ರೆಗಳು ಹಾಗೂ ಶ್ರೀನಗರದ ಸ್ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಹುತೇಕ ಯಾತ್ರಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಗಂಡೇರ್‌ಬಾಲ್ ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಅಧಿಕಾರಿಗಳೊಂದಿಗೆ ಮಾತನಾಡಿ ಗಾಯಾಳುಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಗಾಯಗೊಂಡ ಭಕ್ತರಿಗೆ ಅಗತ್ಯ ನೆರವು ಹಾಗೂ ಉತ್ತಮ ವೈದ್ಯಕೀಯ ಚಿಕಿತ್ಸೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ವರ್ಷದ ವಾರ್ಷಿಕ ಅಮರನಾಥ ಯಾತ್ರೆ ಜುಲೈ 2ರಂದು ಆರಂಭವಾಗಿದ್ದು, ಇದುವರೆಗೆ 4.15 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಪವಿತ್ರ ಹಿಮಲಿಂಗದ ದರ್ಶನ ಪಡೆದಿದ್ದಾರೆ. 57 ದಿನಗಳ ಕಾಲ ನಡೆಯುವ ಯಾತ್ರೆ ಆಗಸ್ಟ್ 28ರಂದು ಮುಕ್ತಾಯಗೊಳ್ಳಲಿದೆ.



