ಬೆಂಗಳೂರು: ರಸ್ತೆ ಬದಿಯಲ್ಲಿ ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿಗೆ ಅಸಭ್ಯವಾಗಿ ಮಾತನಾಡಿ, ‘ನಿನ್ನ ರೇಟ್ ಎಷ್ಟು?’ ಎಂದು ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ವಿಜಯ್ ರಾಘವ್ (42) ಎಂದು ಗುರುತಿಸಲಾಗಿದ್ದು, ಆತ ಹಣ್ಣಿನ ವ್ಯಾಪಾರಿಯಾಗಿದ್ದು, ನಗರದ ಎನ್‌ಆರ್‌ಐ ಲೇಔಟ್ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ಯಾಬ್‌ಗಾಗಿ ರಸ್ತೆ ಬದಿಯಲ್ಲಿ ಕಾಯುತ್ತಿದ್ದ ಯುವತಿಯ ಬಳಿ ಸ್ಕೂಟರ್‌ನಲ್ಲಿ ಬಂದ ವಿಜಯ್ ರಾಘವ್ ಅಸಭ್ಯವಾಗಿ ಮಾತನಾಡಿ, ಲೈಂಗಿಕವಾಗಿ ನಿಂದಿಸುತ್ತಾ ‘ನಿನ್ನ ರೇಟ್ ಎಷ್ಟು?’ ಎಂದು ಪ್ರಶ್ನಿಸಿ ಕಿರುಕುಳ ನೀಡಿದ್ದಾನೆ.
ಘಟನೆಯ ವೇಳೆ ಧೈರ್ಯ ಕಳೆದುಕೊಳ್ಳದ ಯುವತಿ, ತನ್ನ ಮೊಬೈಲ್‌ನಲ್ಲಿ ಆರೋಪಿಯ ಕೃತ್ಯವನ್ನು ವಿಡಿಯೊ ರೂಪದಲ್ಲಿ ಸೆರೆಹಿಡಿದಿದ್ದಾಳೆ. ತನ್ನ ಮುಖ ಹಾಗೂ ವಾಹನದ ನೋಂದಣಿ ಸಂಖ್ಯೆ ಸಂಪೂರ್ಣವಾಗಿ ದಾಖಲಾಗುತ್ತಿರುವುದು ಗೊತ್ತಾಗುತ್ತಿದ್ದಂತೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಬಳಿಕ ಯುವತಿ ಆ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡು, ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದರು. ನಗರದಲ್ಲಿ ಮಹಿಳೆಯರು ಒಂಟಿಯಾಗಿ ನಿಲ್ಲುವುದಕ್ಕೂ ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆಯೇ ಎಂದು ಆತಂಕ ವ್ಯಕ್ತಪಡಿಸಿದ್ದ ಅವರು, ವಿಡಿಯೊ ಸಮೇತ ಬೆಂಗಳೂರು ನಗರ ಪೊಲೀಸರನ್ನು ಟ್ಯಾಗ್ ಮಾಡಿ ಆರೋಪಿಯ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.
ಘಟನೆ ಸಂಬಂಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಆರಂಭಿಸಿದ್ದ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.



