ಜಪಾನ್: ಇಲ್ಲಿನ ದಕ್ಷಿಣ ಭಾಗದ ಕ್ಯುಶು ದ್ವೀಪದಲ್ಲಿರುವ ಕುಮಾಮೊಟೊ ಪ್ರಾಂತ್ಯದಲ್ಲಿ ಸಂಭವಿಸಿದ ಪ್ರಬಲ ಭೂಕಂಪ ಭಾರೀ ಅನಾಹುತ ಸೃಷ್ಟಿಸಿದೆ. ಆರಂಭಿಕ ಮಾಹಿತಿಯ ಪ್ರಕಾರ 7.1 ತೀವ್ರತೆಯ ಭೂಕಂಪದಿಂದ ಕನಿಷ್ಠ 13 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪ್ರಧಾನಿ ಸನಾಯೆ ತಕೈಚಿ ತಿಳಿಸಿದ್ದಾರೆ.
ಯುಎಸ್ ಜಿಯೋಲಾಜಿಕಲ್ ಸರ್ವೆ (USGS) ಪ್ರಕಾರ ಭೂಕಂಪದ ತೀವ್ರತೆ 6.8 ಆಗಿದ್ದು, 10 ಕಿಲೋಮೀಟರ್ ಆಳದಲ್ಲಿ ದಾಖಲಾಗಿದೆ. ಆದರೆ ಆರಂಭಿಕ ವರದಿಗಳಲ್ಲಿ 7.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಉಲ್ಲೇಖಿಸಲಾಗಿದೆ. ಮಂಗಳವಾರ ಮಧ್ಯಾಹ್ನ 4:27ಕ್ಕೆ ಸಂಭವಿಸಿದ ಭೂಕಂಪದಿಂದ ಹಲವೆಡೆ ಕಟ್ಟಡಗಳು ಕುಸಿದಿವೆ, ಬೆಂಕಿ ಅವಘಡಗಳು ಸಂಭವಿಸಿವೆ, ಸೇತುವೆಗಳು ಹಾನಿಗೊಳಗಾಗಿವೆ ಹಾಗೂ ಸರಕು ಸಾಗಣೆ ರೈಲುಗಳು ಹಳಿ ತಪ್ಪಿವೆ.
ಭೂಕಂಪದ ಬೆನ್ನಲ್ಲೇ ಜಪಾನ್ ಸರ್ಕಾರ ಸುನಾಮಿ ಎಚ್ಚರಿಕೆ ಜಾರಿಗೊಳಿಸಿದ್ದು, ಒಂದು ಮೀಟರ್ ಎತ್ತರದ ಅಲೆಗಳು ಅಪ್ಪಳಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಕರಾವಳಿ ಭಾಗದ ನಿವಾಸಿಗಳಿಗೆ ತಕ್ಷಣ ಸುರಕ್ಷಿತ ಹಾಗೂ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿದೆ.
ಪರಮಾಣು ನಿಯಂತ್ರಣ ಪ್ರಾಧಿಕಾರವು ದೇಶದ ಪರಮಾಣು ವಿದ್ಯುತ್ ಸ್ಥಾವರಗಳಲ್ಲಿ ಯಾವುದೇ ತಕ್ಷಣದ ಅಸಹಜ ಬೆಳವಣಿಗೆ ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದಾಗ್ಯೂ ಎಲ್ಲಾ ಸ್ಥಾವರಗಳ ಮೇಲೆ ನಿರಂತರ ನಿಗಾ ವಹಿಸಲಾಗಿದೆ.
ಕುಮಾಮೊಟೊ, ನಾಗಸಾಕಿ, ಕಾಗೋಶಿಮಾ, ಫುಕುವೋಕಾ, ಸಾಗಾ, ಓಯಿಟಾ ಹಾಗೂ ಮಿಯಾಜಾಕಿ ಸೇರಿದಂತೆ ಹಲವು ಪ್ರಾಂತ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಕಳೆದ ಒಂದು ವಾರದ ಅವಧಿಯಲ್ಲಿ ಜಪಾನ್ನಲ್ಲಿ ಸಂಭವಿಸಿದ ಎರಡನೇ ಪ್ರಬಲ ಭೂಕಂಪ ಇದಾಗಿದ್ದು, ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿವೆ.



