ಚಿತ್ರದುರ್ಗ: ಪ್ರೀತಿಯ ಬಲೆಗೆ ಬಿದ್ದಿದ್ದ 17 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ಪ್ರಿಯಕರ ಕರಿಯಣ್ಣ ಎಂಬಾತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ.
ಮಾಹಿತಿಯ ಪ್ರಕಾರ, ಅಪ್ರಾಪ್ತ ಬಾಲಕಿ ಹಾಸ್ಟೆಲ್ನಲ್ಲಿ ವಾಸವಿದ್ದುಕೊಂಡು ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಈ ವೇಳೆ ಗೂಡ್ಸ್ ವಾಹನ ಚಾಲಕನಾಗಿದ್ದ ಕರಿಯಣ್ಣನೊಂದಿಗೆ ಆಕೆಗೆ ಪರಿಚಯವಾಗಿ, ಬಳಿಕ ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ.
ಕೆಲ ದಿನಗಳ ಬಳಿಕ ಬಾಲಕಿ ಗರ್ಭಿಣಿಯಾಗಿರುವುದು ತಿಳಿದುಬಂದಿದ್ದು, ಆಕೆಯ ತಾಯಿ ಹಿರಿಯೂರು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಅಪ್ರಾಪ್ತ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ಬಾಲಕಿ ಅಪ್ರಾಪ್ತೆ ಎಂಬುದು ತಿಳಿದ ತಕ್ಷಣ ಆಸ್ಪತ್ರೆ ಸಿಬ್ಬಂದಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣದ ಕುರಿತು ಹಿರಿಯೂರು ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪ್ರಕರಣದ ಗಂಭೀರತೆ ಪರಿಗಣಿಸಿದ ಪೊಲೀಸರು ಬಾಲಕಿಯ ಪ್ರಿಯಕರ ಕರಿಯಣ್ಣ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಇನ್ನು ಬಾಲಕಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ‘ಸಖಿ ಕೇಂದ್ರ’ಕ್ಕೆ ಸ್ಥಳಾಂತರಿಸಲಾಗಿದ್ದು, ಆಕೆಗೆ ಆರೈಕೆ, ಕೌನ್ಸೆಲಿಂಗ್ ಹಾಗೂ ಅಗತ್ಯ ಕಾನೂನು ನೆರವು ನೀಡಲಾಗುತ್ತಿದೆ.
ಈ ಕುರಿತು ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



