ಯಾದಗಿರಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮವಾಗಿ ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಹರಿದುಬಂದಿದ್ದು, ಒಂದೇ ದಿನದಲ್ಲಿ ನದಿ ಮೈದುಂಬಿ ಹರಿಯುತ್ತಿದೆ. ಬತ್ತಿಹೋಗಿದ್ದ ನದಿ ಇದೀಗ ಜೀವಕಳೆ ಪಡೆದುಕೊಂಡಿದ್ದು, ನದಿ ತೀರದ ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಮಹಾರಾಷ್ಟ್ರದಿಂದ ಹರಿದುಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಗುರುಸಣಗಿ ಬ್ಯಾರೇಜ್‌ನಿಂದ ಸುಮಾರು 50 ಸಾವಿರ ಕ್ಯೂಸೆಕ್ ನೀರನ್ನು ಭೀಮಾ ನದಿಗೆ ಬಿಡುಗಡೆ ಮಾಡಲಾಗಿದೆ. ಇದರಿಂದ ಯಾದಗಿರಿ ಜಿಲ್ಲೆಯ ನದಿ ತೀರದ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಸ್ಥಳೀಯರು ಎಚ್ಚರಿಕೆಯಿಂದ ಇರಲು ಅಧಿಕಾರಿಗಳು ಸೂಚಿಸಿದ್ದಾರೆ.
ಭಾರೀ ನೀರಿನ ಹರಿವಿನಿಂದ ನದಿ ತೀರದಲ್ಲಿರುವ ವೀರಾಂಜನೇಯ ಹಾಗೂ ಕಂಗಳೇಶ್ವರ ದೇವಾಲಯಗಳಿಗೆ ಜಲದಿಗ್ಬಂಧನ ಉಂಟಾಗಿದೆ. ದೇವಾಲಯಗಳ ಸುತ್ತ ನೀರು ಆವರಿಸಿರುವುದರಿಂದ ಭಕ್ತರು ದೇವಾಲಯದೊಳಗೆ ತೆರಳಲು ಸಾಧ್ಯವಾಗದೆ, ದೂರದಿಂದಲೇ ದೇವರ ದರ್ಶನ ಪಡೆಯುತ್ತಿದ್ದಾರೆ.
ಇನ್ನೊಂದೆಡೆ, ಭೀಮಾ ನದಿಯಲ್ಲಿ ನೀರಿನ ಹರಿವು ಹೆಚ್ಚಿರುವುದು ರೈತರಿಗೆ ಸಂತಸದ ಸುದ್ದಿಯಾಗಿದೆ. ನೀರಿನ ಲಭ್ಯತೆಯಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದ್ದು, ಮುಂಗಾರು ಬೆಳೆಗಳಿಗೆ ಇದು ವರದಾನವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.



