ಬೆಂಗಳೂರು: ಕಾವೇರಿ ನೀರು ಹಂಚಿಕೆ ಹಾಗೂ ಮೇಕೆದಾಟು ಯೋಜನೆ ವಿಚಾರದಲ್ಲಿ ಸಹಕಾರ ನೀಡುವಂತೆ ಕೋರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಶತಮಾನಗಳಿಂದಲೂ ಇತಿಹಾಸ, ಸಂಸ್ಕೃತಿ, ವಾಣಿಜ್ಯ ಹಾಗೂ ಜನರ ನಡುವಿನ ಆತ್ಮೀಯ ಸಂಬಂಧಗಳ ಮೂಲಕ ಬೆಸೆದುಕೊಂಡಿವೆ ಎಂದು ಪತ್ರದಲ್ಲಿ ವಿಜಯೇಂದ್ರ ಉಲ್ಲೇಖಿಸಿದ್ದಾರೆ.
ಎರಡೂ ರಾಜ್ಯಗಳು ಪರಸ್ಪರ ಗೌರವ ಮತ್ತು ಸದ್ಭಾವನೆಯ ಆಧಾರದ ಮೇಲೆ ಸಹೋದರ ರಾಜ್ಯಗಳಂತೆ ನಡೆದುಕೊಂಡಿವೆ. ಕೋಟ್ಯಂತರ ತಮಿಳು ಜನರು ಕರ್ನಾಟಕವನ್ನು, ಅದರಲ್ಲೂ ವಿಶೇಷವಾಗಿ ಬೆಂಗಳೂರನ್ನು ತಮ್ಮ ನೆಲೆಯನ್ನಾಗಿ ಮಾಡಿಕೊಂಡು ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಅದೇ ರೀತಿ ತಮಿಳುನಾಡಿನಲ್ಲಿ ನೆಲೆಸಿರುವ ಕನ್ನಡಿಗರು ಅಲ್ಲಿನ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ನೆರೆಯ ರಾಜ್ಯಗಳ ನಡುವೆ ಭಿನ್ನಾಭಿಪ್ರಾಯಗಳು ಸಹಜವಾಗಿದ್ದು, ಅವುಗಳನ್ನು ಯಾವ ರೀತಿಯಲ್ಲಿ ಬಗೆಹರಿಸುತ್ತೇವೆ ಎಂಬುದು ಮುಖ್ಯ ಎಂದು ವಿಜಯೇಂದ್ರ ಹೇಳಿದ್ದಾರೆ. ಬೆಂಗಳೂರಿನ ತಿರುಳ್ಳುವರ್ ಪ್ರತಿಮೆ ವಿಚಾರವನ್ನು ಉಲ್ಲೇಖಿಸಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ರಾಜತಾಂತ್ರಿಕ ನಡೆ ಹಾಗೂ ಸಹಕಾರದ ಮೂಲಕ ಆ ಸಮಸ್ಯೆ ಬಗೆಹರಿದಿತ್ತು ಎಂದು ಸ್ಮರಿಸಿದ್ದಾರೆ.
ಇದೇ ಮನೋಭಾವದಿಂದ ಕಾವೇರಿ ನೀರಿನ ವಿಚಾರವನ್ನು ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚಿಸಲು ಬೆಂಗಳೂರಿಗೆ ಭೇಟಿ ನೀಡುತ್ತಿರುವ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು, ಕರ್ನಾಟಕದ ರೈತರು ಹಾಗೂ ನಾಗರಿಕರ ಹಿತದೃಷ್ಟಿಯಿಂದ ವಿಚಾರವನ್ನು ಪರಿಗಣಿಸಬೇಕು ಎಂದು ವಿಜಯೇಂದ್ರ ಮನವಿ ಮಾಡಿದ್ದಾರೆ.
ಕಾವೇರಿ ನದಿ ಬೆಂಗಳೂರು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದ ಹಲವು ನಗರಗಳ ಕೋಟ್ಯಂತರ ಜನರ ಜೀವನಾಡಿಯಾಗಿದೆ. ಕರ್ನಾಟಕದಲ್ಲಿ ವಾಸಿಸುವ ಕನ್ನಡಿಗರು ಮತ್ತು ತಮಿಳು ಜನರು ಇಬ್ಬರೂ ಕುಡಿಯುವ ನೀರಿಗಾಗಿ ಕಾವೇರಿಯನ್ನೇ ಅವಲಂಬಿಸಿದ್ದಾರೆ. ಅನಿಶ್ಚಿತ ಮುಂಗಾರು ಪರಿಸ್ಥಿತಿಯಲ್ಲಿ ರೈತರು ಹಾಗೂ ಜನರ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ಮೇಕೆದಾಟು ಯೋಜನೆಯನ್ನು ಸಹಕಾರದ ದೃಷ್ಟಿಯಿಂದ ನೋಡುವಂತೆ ವಿಜಯೇಂದ್ರ ಮನವಿ ಮಾಡಿದ್ದಾರೆ. ತಮಿಳುನಾಡಿನ ನ್ಯಾಯಸಮ್ಮತ ನೀರಿನ ಹಕ್ಕಿಗೆ ಯಾವುದೇ ಧಕ್ಕೆಯಾಗದಂತೆ ಈ ಯೋಜನೆ ಬೆಂಗಳೂರಿನ ಕುಡಿಯುವ ನೀರಿನ ಅಗತ್ಯವನ್ನು ಪೂರೈಸುವ ಸಾಮರ್ಥ್ಯ ಹೊಂದಿದೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕದ ಹಿತಾಸಕ್ತಿಗಳನ್ನು ರಕ್ಷಿಸುವುದರ ಜೊತೆಗೆ ತಮಿಳುನಾಡಿನ ಹಿತವನ್ನೂ ಗೌರವಿಸುವ ರಾಜತಾಂತ್ರಿಕ ನಿಲುವು ಎರಡೂ ರಾಜ್ಯಗಳ ನಡುವಿನ ಐತಿಹಾಸಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲಿದೆ. ಕಾವೇರಿ ಜನರನ್ನು ವಿಭಜಿಸುವ ಬದಲು ಒಗ್ಗೂಡಿಸುವ ಸೇತುವೆಯಾಗಲಿ ಎಂದು ವಿಜಯೇಂದ್ರ ಪತ್ರದ ಮೂಲಕ ಆಶಯ ವ್ಯಕ್ತಪಡಿಸಿದ್ದಾರೆ.



