HomeGadag Newsವಿದ್ಯಾರ್ಥಿನಿ ವೀಣಾ ಹಾನಾಪೂರ ಪ್ರಕರಣಕ್ಕೆ ಹೊಸ ತಿರುವು?

ವಿದ್ಯಾರ್ಥಿನಿ ವೀಣಾ ಹಾನಾಪೂರ ಪ್ರಕರಣಕ್ಕೆ ಹೊಸ ತಿರುವು?

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಡಾ. ವೀಣಾ ಹಾನಾಪೂರ ಅವರ ಸಂಶಯಾಸ್ಪದ ಸಾವಿನ ಪ್ರಕರಣದಲ್ಲಿ ಹೊಸ ಅನುಮಾನಗಳು ಮೂಡಿದ್ದು, ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿನ ಸಿಸಿಟಿವಿ ಕ್ಯಾಮೆರಾಗಳು ಕಳೆದ ಒಂದು ತಿಂಗಳಿಂದ ಕಾರ್ಯನಿರ್ವಹಿಸದಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರನ್ನು ಮೃತ ವಿದ್ಯಾರ್ಥಿನಿಯ ಪಾಲಕರೊಂದಿಗೆ ಭೇಟಿ ಮಾಡಿದ ಉತ್ತರ ಕರ್ನಾಟಕ ಮಹಾಸಭಾ ರಾಜ್ಯಾಧ್ಯಕ್ಷ ಹಾಗೂ ಹಿರಿಯ ವಕೀಲ ರವಿಕಾಂತ ಅಂಗಡಿ, ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಅವರು, ವಿದ್ಯಾರ್ಥಿನಿಯರ ಸುರಕ್ಷತೆಯ ಹೊಣೆ ಹೊತ್ತಿರುವ ವಿಶ್ವವಿದ್ಯಾಲಯದಲ್ಲಿ ಒಂದು ತಿಂಗಳಿಂದ ಸಿಸಿಟಿವಿ ವ್ಯವಸ್ಥೆ ಸ್ಥಗಿತಗೊಂಡಿರುವುದು ಗಂಭೀರ ಆಡಳಿತಾತ್ಮಕ ವೈಫಲ್ಯವಾಗಿದೆ. ಇಂತಹ ಪ್ರಕರಣದಲ್ಲಿ ಸತ್ಯವನ್ನು ಮುಚ್ಚಿಹಾಕುವ ಯಾವುದೇ ಪ್ರಯತ್ನವನ್ನು ಉತ್ತರ ಕರ್ನಾಟಕ ಮಹಾಸಭಾ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ವಿದ್ಯಾರ್ಥಿನಿಯ ಸಾವಿನಂತಹ ಗಂಭೀರ ಘಟನೆ ನಡೆದಿದ್ದರೂ ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಗಳ ಸ್ಪಂದನೆ ತೃಪ್ತಿಕರವಾಗಿಲ್ಲ. ಪ್ರಕರಣದಲ್ಲಿ ಯಾರನ್ನಾದರೂ ರಕ್ಷಿಸುವ ಅಥವಾ ಸಾಕ್ಷ್ಯಗಳನ್ನು ದುರ್ಬಲಗೊಳಿಸುವ ಪ್ರಯತ್ನ ನಡೆದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಪ್ರಕರಣವನ್ನು ಸಿಬಿಐ ಅಥವಾ ಸ್ವತಂತ್ರ ತನಿಖಾ ಸಂಸ್ಥೆಗೆ ವಹಿಸಿ, ಡಿಜಿಟಲ್ ಸಾಕ್ಷ್ಯಗಳು, ಮೊಬೈಲ್ ಕರೆ ವಿವರಗಳು, ಸಿಸಿಟಿವಿ ತಾಂತ್ರಿಕ ದಾಖಲೆಗಳು, ವಸತಿ ನಿಲಯದ ಹಾಜರಾತಿ ದಾಖಲೆಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಪಾತ್ರವನ್ನು ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಾ. ನಾಗಲಕ್ಷ್ಮಿ ಚೌಧರಿ, ಸಿಸಿಟಿವಿ ವ್ಯವಸ್ಥೆ ಕಾರ್ಯನಿರ್ವಹಿಸದಿರುವುದು ಮೇಲ್ನೋಟಕ್ಕೆ ಗಂಭೀರ ಆಡಳಿತಾತ್ಮಕ ಲೋಪವಾಗಿದ್ದು, ಈ ಕುರಿತು ಪ್ರತ್ಯೇಕ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ, ಗೃಹ ಸಚಿವರನ್ನು ಭೇಟಿ ಮಾಡಿ ಯಾವುದೇ ಪ್ರಭಾವಕ್ಕೆ ಅವಕಾಶ ನೀಡದೆ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಮನವಿ ಮಾಡುವುದಾಗಿ ತಿಳಿಸಿದರು.

ಕುಲಪತಿ, ರಿಜಿಸ್ಟ್ರಾರ್, ವಸತಿ ನಿಲಯದ ವಾರ್ಡನ್ ಸೇರಿದಂತೆ ಕರ್ತವ್ಯಲೋಪ ಎಸಗಿರುವುದು ಸಾಬೀತಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಡಾ. ವೀಣಾ ಹಾನಾಪೂರ ಅವರ ಕುಟುಂಬಕ್ಕೆ ನ್ಯಾಯ ದೊರೆಯುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ರವಿಕಾಂತ ಅಂಗಡಿ ಸ್ಪಷ್ಟಪಡಿಸಿದರು.

“ಒಂದು ತಿಂಗಳಿಂದ ಸಿಸಿಟಿವಿ ಕಾರ್ಯನಿರ್ವಹಿಸದಿರುವುದು ಸಾಮಾನ್ಯ ಲೋಪವಲ್ಲ. ವೀಣಾ ಹಾನಾಪೂರ ಪ್ರಕರಣದ ಸತ್ಯ ಹೊರಬರಲು ನಿಷ್ಪಕ್ಷಪಾತ ತನಿಖೆಯೇ ಏಕೈಕ ಮಾರ್ಗ.”

– ರವಿಕಾಂತ ಅಂಗಡಿ, ರಾಜ್ಯಾಧ್ಯಕ್ಷರು, ಉತ್ತರ ಕರ್ನಾಟಕ ಮಹಾಸಭಾ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img