ವಿಜಯಸಾಕ್ಷಿ ಸುದ್ದಿ, ಗದಗ: ಕನಕದಾಸ ಶಿಕ್ಷಣ ಸಮಿತಿ ಹಾಗೂ ಡಾ. ಬಿ.ಎಫ್. ದಂಡಿನ ವಿದ್ಯಾರ್ಥಿ ಬಳಗದ ಆಶ್ರಯದಲ್ಲಿ ಅಗಲಿದ ಶಿಕ್ಷಣ ತಜ್ಞ ಡಾ. ಬಿ.ಎಫ್. ದಂಡಿನ ಹಾಗೂ ಶಕುಂತಲಾಬಾಯಿ ದಂಡಿನ ಅವರ ಸ್ಮರಣಾರ್ಥ ಸಾರ್ವಜನಿಕ ನುಡಿನಮನ ಸಭೆ ಹಾಗೂ ಸ್ಮಾರಕ ಭವನದ ಭೂಮಿಪೂಜೆ ಕಾರ್ಯಕ್ರಮ ಆಗಸ್ಟ್ 5ರಂದು ಬೆಳಿಗ್ಗೆ 10.30ಕ್ಕೆ ನಗರದ ಗಾಣಿಗ ಭವನದಲ್ಲಿ ನಡೆಯಲಿದೆ ಎಂದು ಸಮಿತಿ ಪದಾಧಿಕಾರಿಗಳು ತಿಳಿಸಿದರು.
ಸೋಮವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಎನ್. ಕಾಮನಹಳ್ಳಿ, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಾಗಿನೆಲೆ ಮಹಾಸಂಸ್ಥಾನದ ನಿರಂಜನಾನಂದ ಪುರಿ ಮಹಾಸ್ವಾಮಿಗಳು ಸೇರಿದಂತೆ ವಿವಿಧ ಮಠಾಧೀಶರು ವಹಿಸಲಿದ್ದು, ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಡಾ. ಡಿ.ಬಿ. ಗವಾನಿ ಮಾತನಾಡಿ, ಡಾ. ಬಿ.ಎಫ್. ದಂಡಿನ ಅವರು ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣದ ಬೆಳಕು ನೀಡಿದ ಮಹನೀಯರು. ಅವರ ಸೇವೆಯನ್ನು ಚಿರಸ್ಥಾಯಿಗೊಳಿಸುವ ಉದ್ದೇಶದಿಂದ ಸ್ಮಾರಕ ಭವನ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಹಾಲುಮತ ಮಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಮಾತನಾಡಿ, ಶಿಕ್ಷಕರಾಗಿ ಆರಂಭಿಸಿದ ಡಾ. ದಂಡಿನ ಅವರು 65ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಶಿಕ್ಷಣ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಜೀವನದ ಕೊನೆಯ ಕ್ಷಣದವರೆಗೂ ಶಿಕ್ಷಣ ಸೇವೆಯನ್ನೇ ಧ್ಯೇಯವಾಗಿಸಿಕೊಂಡು ಬದುಕಿದ ಅವರ ಆದರ್ಶ ಸಮಾಜಕ್ಕೆ ಮಾದರಿಯಾಗಿದೆ ಎಂದು ಸ್ಮರಿಸಿದರು.
ಸುದ್ದಿಗೋಷ್ಠಿಯಲ್ಲಿ ರವಿ ದಂಡಿನ, ಪ್ರೊ. ಅನಿಲ ವೈದ್ಯ, ಡಾ. ಎನ್.ಎಂ. ಅಂಬನಿ, ಬಸವರಾಜ ಬಿಂಗಿ, ಯಲ್ಲಪ್ಪ ಗುರಿಕಾರ ಹಾಗೂ ವೈ.ಡಿ. ಜಡದೇಲಿ ಉಪಸ್ಥಿತರಿದ್ದರು.



