ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸುಮಾರು 15-20 ವರ್ಷಗಳಿಂದ ಚರಂಡಿ ನೀರು ನಿಂತು 160ಕ್ಕೂ ಹೆಚ್ಚು ಎಕರೆ ಫಲವತ್ತಾದ ಕೃಷಿಭೂಮಿ ಹಾಳಾಗಿರುವ ಅಡರಕಟ್ಟಿ ಗ್ರಾಮದ ಸಮಸ್ಯೆಗೆ ಕೊನೆಗೂ ಜಿಲ್ಲಾಡಳಿತ ಸ್ಪಂದಿಸಿದೆ. ರೈತರು ಒಂದು ವಾರದ ಗಡುವು ನೀಡಿ ಹೋರಾಟದ ಎಚ್ಚರಿಕೆ ನೀಡಿದ ಬೆನ್ನಲ್ಲೇ ಗದಗ ಉಪವಿಭಾಗಾಧಿಕಾರಿ ಹಾಗೂ ಪುರಸಭೆ ಆಡಳಿತಾಧಿಕಾರಿ ಗಂಗಪ್ಪ ಎಂ. ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ಅವರೊಂದಿಗೆ ಗದಗ ನಾಕಾ ಬಳಿಯ ಲಂಡಿ ಹಳ್ಳದಿಂದ ಹರಿದುಬರುವ ಚರಂಡಿ ನೀರನ್ನು ವೀಕ್ಷಿಸಿದ ಉಪವಿಭಾಗಾಧಿಕಾರಿಗಳು, ಬಳಿಕ ಅಡರಕಟ್ಟಿ ಗ್ರಾಮಕ್ಕೆ ತೆರಳಿ ಜವುಳು ಬೆಳೆದು ನಿರುಪಯುಕ್ತವಾಗಿರುವ ಕೃಷಿಭೂಮಿಗಳನ್ನು ಪರಿಶೀಲಿಸಿ ರೈತರ ಅಹವಾಲು ಆಲಿಸಿದರು.
ರೈತರು, ತಾತ್ಕಾಲಿಕ ಕಾಮಗಾರಿ ಬದಲಾಗಿ ಶಾಶ್ವತ ಪರಿಹಾರ ಕಲ್ಪಿಸಬೇಕು. ಲಂಡಿ ಹಳ್ಳದಿಂದ ಪೈಪ್‌ಲೈನ್ ಅಳವಡಿಸಿ ಚರಂಡಿ ನೀರನ್ನು ಡಬ್ಬಾಡುಬ್ಬಿ ಹಳ್ಳಕ್ಕೆ ಹರಿಸುವ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್, ಹನುಮಂತ ನಂದೆಣ್ಣವರ ಹಾಗೂ ರೈತರಾದ ಸಿದ್ದಣ್ಣ ಹವಳದ, ಮುತ್ತಣ್ಣ ಗಡೆಪ್ಪನವರ, ಚನ್ನಬಸಪ್ಪ ಹಳೆಮನಿ, ಗಂಗನಗೌಡ್ರ ಪಾಟೀಲ, ಯಲ್ಲಪ್ಪ ಗಡೆಪ್ಪನವರ, ಮಾಂತೇಶ ಲಿಂಗಶೆಟ್ಟಿ, ಮೌನೇಶ ಗಡೆಪ್ಪನವರ, ಚಂದ್ರು ಮಾಗಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಆಗಸ್ಟ್ 16ರ ನಂತರ ಸಂಬಂಧಿಸಿದ ಅಧಿಕಾರಿಗಳು, ಇಂಜಿನಿಯರ್‌ಗಳು ಹಾಗೂ ರೈತರ ಸಭೆ ನಡೆಸಿ ಎರಡು-ಮೂರು ಶಾಶ್ವತ ಯೋಜನೆಗಳ ರೂಪುರೇಷೆ ಸಿದ್ಧಪಡಿಸಿ. ಅಮೃತ್-2 ಯೋಜನೆಯಡಿ ಸಾಧ್ಯವಾದರೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ರೈತರ ಸಮಸ್ಯೆ ಬಗೆಹರಿಸಲು ವಿಶೇಷ ಕಾಳಜಿ ವಹಿಸುತ್ತೇವೆ.”
ಗಂಗಪ್ಪ ಎಂ., ಉಪವಿಭಾಗಾಧಿಕಾರಿ



