HomeKarnataka Newsಗಣೇಶೋತ್ಸವಕ್ಕೆ PoP ಗಣೇಶ ಮೂರ್ತಿಗಳಿಗೆ ಬ್ರೇಕ್: ಮಣ್ಣಿನ ಗಣಪತಿಗೆ ಮಾತ್ರ ಅವಕಾಶ ನೀಡುವಂತೆ ಈಶ್ವರ ಖಂಡ್ರೆ...

ಗಣೇಶೋತ್ಸವಕ್ಕೆ PoP ಗಣೇಶ ಮೂರ್ತಿಗಳಿಗೆ ಬ್ರೇಕ್: ಮಣ್ಣಿನ ಗಣಪತಿಗೆ ಮಾತ್ರ ಅವಕಾಶ ನೀಡುವಂತೆ ಈಶ್ವರ ಖಂಡ್ರೆ ಸೂಚನೆ

For Dai;y Updates Join Our whatsapp Group

ಬೆಂಗಳೂರು: ಸೆಪ್ಟೆಂಬರ್ 14ರಂದು ರಾಜ್ಯಾದ್ಯಂತ ಆಚರಿಸಲಿರುವ ಗಣೇಶೋತ್ಸವದ ಹಿನ್ನೆಲೆಯಲ್ಲಿ ನಿಷೇಧಿತ ಪ್ಲಾಸ್ಟರ್ ಆಫ್ ಪ್ಯಾರಿಸ್ (PoP) ಹಾಗೂ ರಾಸಾಯನಿಕ ಬಣ್ಣ ಬಳಸಿ ತಯಾರಿಸಲಾದ ಗಣೇಶ ಮೂರ್ತಿಗಳ ತಯಾರಿಕೆ, ಸಾಗಾಟ, ಮಾರಾಟ ಮತ್ತು ವಿಸರ್ಜನೆಗೆ ಅವಕಾಶ ನೀಡದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಈ ಸಂಬಂಧ ಇಲಾಖೆಯ ಕಾರ್ಯದರ್ಶಿಗೆ ಲಿಖಿತ ನಿರ್ದೇಶನ ನೀಡಿರುವ ಸಚಿವರು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಸರ ಸ್ನೇಹಿ, ಬಣ್ಣರಹಿತ ಮಣ್ಣಿನ ಗೌರಿ-ಗಣೇಶ ಮೂರ್ತಿಗಳ ಪೂಜೆ ಮತ್ತು ವಿಸರ್ಜನೆಗೆ ಮಾತ್ರ ಅವಕಾಶ ಕಲ್ಪಿಸುವಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಗಣೇಶನು ಮಣ್ಣಿನಿಂದ ರೂಪುಗೊಳ್ಳುವ ದೇವರಾಗಿರುವುದರಿಂದ ಪರಿಸರ ಹಾಗೂ ಜಲಮೂಲಗಳ ಸಂರಕ್ಷಣೆ ದೃಷ್ಟಿಯಿಂದ ಮಣ್ಣಿನ ಗಣೇಶ ಮೂರ್ತಿಗಳ ಬಳಕೆಯನ್ನು ಉತ್ತೇಜಿಸಬೇಕು ಎಂದು ಅವರು ತಿಳಿಸಿದ್ದಾರೆ.

ಗಣೇಶೋತ್ಸವದ ವೇಳೆ ಯಾವುದೇ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಈಗಿನಿಂದಲೇ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ, ದಾಸ್ತಾನು, ಸಾಗಾಟ ಮತ್ತು ಮಾರಾಟಕ್ಕೆ ಕಡಿವಾಣ ಹಾಕಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಕಾರ ಪಡೆಯುವಂತೆ ಸೂಚಿಸಲಾಗಿದೆ. ಜೊತೆಗೆ ಪಂಚಾಯಿತಿ ಮಟ್ಟದಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಭಿಯಾನವನ್ನೂ ಕೈಗೊಳ್ಳುವಂತೆ ಆದೇಶಿಸಲಾಗಿದೆ.

ಸಚಿವ ಈಶ್ವರ ಖಂಡ್ರೆ ಅವರ ಪ್ರಕಾರ, ಪಿಒಪಿ ಮೂರ್ತಿಗಳು ಕ್ಯಾಲ್ಷಿಯಂ ಸಲ್ಫೇಟ್ ಹೆಮಿಹೈಡ್ರೇಟ್‌ನಿಂದ ತಯಾರಾಗುತ್ತವೆ. ಇವುಗಳಲ್ಲಿ ಗಂಧಕ, ರಂಜಕ, ಜಿಪ್ಸಮ್, ಮ್ಯಾಗ್ನೀಷಿಯಂ ಸೇರಿದಂತೆ ಹಲವು ಅಪಾಯಕಾರಿ ಅಂಶಗಳಿದ್ದು, ಪಾದರಸ, ಕ್ಯಾಡ್ಮಿಯಂ, ಸೀಸ ಹಾಗೂ ಇತರ ರಾಸಾಯನಿಕ ಬಣ್ಣಗಳ ಬಳಕೆಯಿಂದ ಪರಿಸರಕ್ಕೆ ಗಂಭೀರ ಹಾನಿ ಉಂಟಾಗುತ್ತದೆ.

ಇಂತಹ ಮೂರ್ತಿಗಳನ್ನು ಕೆರೆ, ನದಿ, ಬಾವಿ ಸೇರಿದಂತೆ ಜಲಮೂಲಗಳಲ್ಲಿ ವಿಸರ್ಜಿಸಿದರೆ ಭಾರ ಲೋಹಗಳು ನೀರಿನಲ್ಲಿ ಕರಗಿ ಜಲಮಾಲಿನ್ಯ ಉಂಟುಮಾಡುವುದಲ್ಲದೆ, ಜಲಚರಗಳ ಸಾವಿಗೆ ಹಾಗೂ ಜನ-ಜಾನುವಾರುಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತವೆ ಎಂದು ಅವರು ಎಚ್ಚರಿಸಿದ್ದಾರೆ.

ಜಲ ಮಾಲಿನ್ಯ (ತಡೆ ಮತ್ತು ನಿಯಂತ್ರಣ) ಕಾಯ್ದೆ-1974ರ ಕಲಂ 33(ಎ) ಅನ್ವಯ ರಾಜ್ಯದ ಯಾವುದೇ ನದಿ, ಕೆರೆ, ಸರೋವರ, ಕಟ್ಟೆ, ಬಾವಿ ಸೇರಿದಂತೆ ಜಲಮೂಲಗಳಲ್ಲಿ ಪಿಒಪಿ ಮೂರ್ತಿಗಳ ವಿಸರ್ಜನೆ ನಿಷೇಧಿಸಲಾಗಿದೆ ಎಂಬುದನ್ನೂ ಸಚಿವರು ನೆನಪಿಸಿದ್ದಾರೆ.

ಪರಿಸರಕ್ಕೆ ಹಾನಿಕಾರಕವಾದ ಪಿಒಪಿ ಮೂರ್ತಿಗಳ ತಯಾರಿಕೆ, ಸಾಗಾಟ, ಮಾರಾಟ ಹಾಗೂ ವಿಸರ್ಜನೆಯನ್ನು ನಿಷೇಧಿಸಿ 2023ರ ಸೆಪ್ಟೆಂಬರ್ 15ರಂದು ಸರ್ಕಾರ ಆದೇಶ ಹೊರಡಿಸಿದ್ದು, ಆ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಹೈಕೋರ್ಟ್ ಕೂಡ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಗ್ರಾಮ ಪಂಚಾಯಿತಿಗಳು ಪರಿಸರ ಮತ್ತು ಜಲಮೂಲಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಈಶ್ವರ ಖಂಡ್ರೆ ಸ್ಪಷ್ಟ ಸೂಚನೆ ನೀಡಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img