ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಉಂಟಾಗಿರುವ ಮಳೆ ಕೊರತೆ ಹಾಗೂ ಬರ ಪರಿಸ್ಥಿತಿಯ ಕುರಿತು ಸಮಗ್ರ ಪರಿಶೀಲನೆ ನಡೆಸಿ, ಶೀಘ್ರದಲ್ಲೇ ಮುಖ್ಯಮಂತ್ರಿ ಅವರಿಗೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಶಿರಸಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಳೆ ಅಭಾವದ ಜೊತೆಗೆ ಭೂಕುಸಿತವೂ ಪ್ರಮುಖ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಹೇಳಿದರು.
“ಜಿಲ್ಲೆಯ ಪ್ರತಿಯೊಂದು ಇಲಾಖೆಯಿಂದ ಅಗತ್ಯ ಮಾಹಿತಿಗಳು ಹಾಗೂ ವರದಿಗಳನ್ನು ಪಡೆಯಲಾಗುತ್ತಿದೆ. ಸ್ಥಳೀಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ನಡೆಸಿ, ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು,” ಎಂದು ಲಕ್ಷ್ಮಣ ಸವದಿ ತಿಳಿಸಿದರು.
ಇದೇ ವೇಳೆ ರಾಜ್ಯ ಸಚಿವ ಸಂಪುಟದಲ್ಲಿ ಉಂಟಾಗಿರುವ ಅಸಮಾಧಾನದ ಕುರಿತು ಪ್ರತಿಕ್ರಿಯಿಸಿದ ಅವರು, ಸಚಿವ ಸ್ಥಾನಗಳ ಸಂಖ್ಯೆ ಸೀಮಿತವಾಗಿರುವುದರಿಂದ ಕೆಲವರಿಗೆ ಅವಕಾಶ ಸಿಗದಿರುವುದು ಸಹಜ ಎಂದು ಹೇಳಿದರು.
“ಸಚಿವ ಸಂಪುಟದಲ್ಲಿ ಕೇವಲ 34 ಸ್ಥಾನಗಳಿಗೆ ಮಾತ್ರ ಅವಕಾಶವಿದೆ. ಸಾಮಾಜಿಕ ನ್ಯಾಯದ ಆಧಾರದ ಮೇಲೆ ಪ್ರಾತಿನಿಧ್ಯ ನೀಡುವಾಗ ಕೆಲವರಿಗೆ ಅವಕಾಶ ತಪ್ಪಬಹುದು. ಹೀಗಾಗಿ ಸಣ್ಣಪುಟ್ಟ ಅಸಮಾಧಾನಗಳು ಇರುವುದು ಸಹಜ. ಆದರೆ ಮುಂದಿನ ನಾಲ್ಕಾರು ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿರಿಯ ನಾಯಕ ಎಚ್.ಕೆ. ಪಾಟೀಲ್ ಅವರು ಯಾವುದೇ ಅಸಮಾಧಾನ ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಸಚಿವ ಸಂಪುಟದ ಬೆಳವಣಿಗೆಗಳು ಶೀಘ್ರದಲ್ಲೇ ಸುಗಮವಾಗಲಿವೆ ಎಂದರು. ಖಾತೆ ಹಂಚಿಕೆ ವಿಳಂಬದ ಕುರಿತು ಮಾತನಾಡಿದ ಲಕ್ಷ್ಮಣ ಸವದಿ, ಹಿಂದೆ ಕೂಡ ಇಂತಹ ಪರಿಸ್ಥಿತಿ ಎದುರಾಗಿತ್ತು ಎಂದು ನೆನಪಿಸಿದರು.
“ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೂ ಎರಡು-ಮೂರು ತಿಂಗಳು ಖಾತೆ ಹಂಚಿಕೆ ಆಗಿರಲಿಲ್ಲ. ಆಗಲೂ ನಾವು ಸಚಿವರಾಗಿ ಕೆಲಸ ಮಾಡಿದ್ದೇವೆ. ಶೀಘ್ರದಲ್ಲೇ ಖಾತೆ ಹಂಚಿಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ,” ಎಂದು ಹೇಳಿದರು.



