ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಬೆಳ್ಳಾಲದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಯುವಕನೋರ್ವನನ್ನು ಮನೆಗೆ ಕರೆಸಿಕೊಂಡ ಯುವತಿಯ ಕುಟುಂಬಸ್ಥರು ಆತನನ್ನು ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸನತ್ ಎಂಬ ಯುವಕನ ಮೇಲೆ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ಯುವತಿ ಹಾಗೂ ಸನತ್ ಇಬ್ಬರೂ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಸ್ನೇಹ ಬೆಳೆದು ಬಳಿಕ ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ.
ಈ ನಡುವೆ ಯುವತಿ, ಸನತ್ನಿಂದ 50 ಸಾವಿರ ರೂಪಾಯಿ ಹಣವನ್ನು ಸಾಲವಾಗಿ ಪಡೆದಿದ್ದಳು ಎಂದು ತಿಳಿದುಬಂದಿದೆ. ಬಳಿಕ ಯುವತಿ ಕೆಲಸ ತೊರೆದಿದ್ದು, ಸನತ್ನ ಕರೆಗಳನ್ನು ಸ್ವೀಕರಿಸದೆ ತಪ್ಪಿಸಿಕೊಳ್ಳುತ್ತಿದ್ದಳು ಎನ್ನಲಾಗಿದೆ.
ಸಾಲದ ಹಣವನ್ನು ವಾಪಸ್ ನೀಡುವಂತೆ ಸನತ್ ಕೇಳಿದಾಗ, ಮನೆಗೆ ಬರುವಂತೆ ಯುವತಿ ತಿಳಿಸಿದ್ದಳು ಎನ್ನಲಾಗಿದೆ. ಅದರಂತೆ ಮನೆ ಬಳಿ ತೆರಳಿದ್ದ ಸನತ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಇದೇ ವೇಳೆ, ಸನತ್ ವಿರುದ್ಧವೂ ದೂರು ದಾಖಲಾಗಿದ್ದು, ದಲಿತ ಯುವತಿ ಮೇಲೆ ದೌರ್ಜನ್ಯ ಹಾಗೂ ಲೈಂಗಿಕ ದೌರ್ಜನ್ಯ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ಸನತ್ ಕೂಡ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಎರಡೂ ದೂರುಗಳ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದಾರೆ.
ಈ ಪ್ರಕರಣದಲ್ಲಿ ಮನೆಗೆ ನುಗ್ಗಿ ದಲಿತ ಯುವತಿ ಮೇಲೆ ದೌರ್ಜನ್ಯ ನಡೆಸಿದ ಆರೋಪ ಹಾಗೂ ಯುವಕನನ್ನು ಮರಕ್ಕೆ ಕಟ್ಟಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮ ಕುಮಾರ್ ಮತ್ತು ನಂದೀಶ್ ಕುಮಾರ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.



