HomeSports Newsಶ್ರೀಲಂಕಾ ವಿರುದ್ಧದ ಟೆಸ್ಟ್ʼಗೂ ಮುನ್ನ ದೇವದತ್ ಪಡಿಕ್ಕಲ್ ಭರ್ಜರಿ ಅರ್ಧಶತಕ

ಶ್ರೀಲಂಕಾ ವಿರುದ್ಧದ ಟೆಸ್ಟ್ʼಗೂ ಮುನ್ನ ದೇವದತ್ ಪಡಿಕ್ಕಲ್ ಭರ್ಜರಿ ಅರ್ಧಶತಕ

For Dai;y Updates Join Our whatsapp Group

ಕೊಲಂಬೊ: ಭಾರತ ಹಾಗೂ ಶ್ರೀಲಂಕಾ ನಡುವಿನ ಮುಂಬರುವ ಟೆಸ್ಟ್ ಸರಣಿಗೆ ಸಿದ್ಧತೆ ನಡೆಸುತ್ತಿರುವ ಟೀಂ ಇಂಡಿಯಾಗೆ ಯುವ ಬ್ಯಾಟರ್ ದೇವದತ್ ಪಡಿಕ್ಕಲ್ ಭರವಸೆ ಮೂಡಿಸಿದ್ದಾರೆ. ಕೊಲಂಬೋದ ಎನ್‌ಸಿಸಿ ಮೈದಾನದಲ್ಲಿ ನಡೆಯುತ್ತಿರುವ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾ ಕ್ರಿಕೆಟ್ ಪ್ರೆಸಿಡೆಂಟ್ಸ್ ಇಲೆವೆನ್ ವಿರುದ್ಧ ಪಡಿಕ್ಕಲ್ ಆಕರ್ಷಕ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದಾರೆ.

ಅಭ್ಯಾಸ ಪಂದ್ಯದ ಎರಡನೇ ದಿನದಾಟದಲ್ಲಿ ಟೀಂ ಇಂಡಿಯಾದ ಮೊದಲ ಇನಿಂಗ್ಸ್ ಆರಂಭವಾಗಿದ್ದು, ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಈ ಹಂತದಲ್ಲಿ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ದೇವದತ್ ಪಡಿಕ್ಕಲ್, ಅನುಭವಿ ಬ್ಯಾಟರ್ ಹಾಗೂ ಮತ್ತೊಬ್ಬ ಕನ್ನಡಿಗ ಕೆ.ಎಲ್. ರಾಹುಲ್ ಅವರೊಂದಿಗೆ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು.

ಎದುರಾಳಿ ಬೌಲರ್‌ಗಳನ್ನು ಆತ್ಮವಿಶ್ವಾಸದಿಂದ ಎದುರಿಸಿದ ಪಡಿಕ್ಕಲ್ ಕೇವಲ 61 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಿಂದ ಅರ್ಧಶತಕ ಪೂರ್ಣಗೊಳಿಸಿದರು. ಆರಂಭಿಕ ಆಘಾತದ ನಡುವೆಯೂ ತಂಡದ ಇನಿಂಗ್ಸ್‌ಗೆ ಆಸರೆಯಾದ ಅವರು, ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ.

ಸಾಯಿ ಸುದರ್ಶನ್ ಸ್ಥಾನಕ್ಕೆ ಪಡಿಕ್ಕಲ್ ಪೈಪೋಟಿ

ಅಭ್ಯಾಸ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಅವರ ಈ ಪ್ರದರ್ಶನ ಇದೀಗ ಮೊದಲ ಟೆಸ್ಟ್‌ನ ಪ್ಲೇಯಿಂಗ್ ಇಲೆವೆನ್ ಆಯ್ಕೆ ವಿಚಾರದಲ್ಲಿ ಕುತೂಹಲ ಮೂಡಿಸಿದೆ. ಈ ಹಿಂದೆ ಟೀಂ ಇಂಡಿಯಾ ಪರ ಮೂರನೇ ಕ್ರಮಾಂಕದಲ್ಲಿ ಸಾಯಿ ಸುದರ್ಶನ್ ಕಣಕ್ಕಿಳಿಯುತ್ತಿದ್ದರು. ಆದರೆ ಬೆರಳಿನ ಗಾಯದ ಕಾರಣ ಸಾಯಿ ಸುದರ್ಶನ್ ಅಭ್ಯಾಸ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಇದೀಗ ಅವರ ಅನುಪಸ್ಥಿತಿಯಲ್ಲಿ ಅವಕಾಶ ಪಡೆದಿರುವ ಪಡಿಕ್ಕಲ್ ಅರ್ಧಶತಕ ಸಿಡಿಸಿರುವುದು ತಂಡದ ಆಯ್ಕೆಗಾರರ ಗಮನ ಸೆಳೆಯುವ ಸಾಧ್ಯತೆಯಿದೆ. ಹೀಗಾಗಿ ಆಗಸ್ಟ್ 15ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಡಿಕ್ಕಲ್‌ಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಸಿಗುತ್ತದೆಯೇ ಎಂಬ ಕುತೂಹಲ ಹೆಚ್ಚಾಗಿದೆ.

ಮೊದಲ ಇನಿಂಗ್ಸ್‌ನಲ್ಲಿ ಶ್ರೀಲಂಕಾ XI ಬೃಹತ್ ಮೊತ್ತ

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಕ್ರಿಕೆಟ್ ಪ್ರೆಸಿಡೆಂಟ್ಸ್ ಇಲೆವೆನ್ ತಂಡವು ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್ ನಷ್ಟಕ್ಕೆ 363 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.

ಇದಕ್ಕೆ ಉತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ 32 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 127 ರನ್ ಗಳಿಸಿತ್ತು. ಆರಂಭಿಕ ವಿಕೆಟ್ ಕಳೆದುಕೊಂಡ ಬಳಿಕ ದೇವದತ್ ಪಡಿಕ್ಕಲ್ ಹಾಗೂ ಕೆ.ಎಲ್. ರಾಹುಲ್ ಜೋಡಿ ತಂಡದ ಇನಿಂಗ್ಸ್‌ ಅನ್ನು ಮುನ್ನಡೆಸಿದೆ.

ಶ್ರೀಲಂಕಾ XI ತಂಡ

ಸೋನಲ್ ದಿನುಷಾ (ನಾಯಕ), ನಿಶಾನ್ ಮದುಷ್ಕ, ಅಂಜಲಾ ಬಂಡಾರ (ವಿಕೆಟ್ ಕೀಪರ್), ರವಿಂದು ರಶಾಂಥ, ಪಸಿಂದು ಸೂರಿಯಬಂಡಾರ, ಪವನ್ ರತ್ನಾಯಕೆ, ಅಹಾನ್ ವಿಕ್ರಮಸಿಂಘೆ, ನಿಪುನ್ ಧನಂಜಯ, ಲಹೀರು ಕುಮಾರ, ವಿಶ್ವ ಫೆರ್ನಾಂಡೊ, ಅಸಂಕ ಮನೋಜ್, ಇಸಿತಾ ವಿಜೇಸುಂದರ, ರಮೇಶ್ ಮೆಂಡಿಸ್, ಕೇಸರ ನುವಂತ, ದಿಲುಮ್ ಸುದೀರ.

ಭಾರತ ಟೆಸ್ಟ್ ತಂಡ

ಶುಭ್‌ಮನ್ ಗಿಲ್ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ರಿಷಭ್ ಪಂತ್, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮಾನವ್ ಸುತಾರ್, ಸಾರಂಶ್ ಜೈನ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ಆಖಿಬ್ ನಬಿ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img