HomeKarnataka Newsಕೋಳಿಗಳಿಗೂ ವಿಮಾ ಪರಿಹಾರ ನೀಡುವುದು ಕಡ್ಡಾಯ; 2 ಸಾವಿರ ಕೋಳಿಗಳ ಸಾವಿನ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ...

ಕೋಳಿಗಳಿಗೂ ವಿಮಾ ಪರಿಹಾರ ನೀಡುವುದು ಕಡ್ಡಾಯ; 2 ಸಾವಿರ ಕೋಳಿಗಳ ಸಾವಿನ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ಆದೇಶ

For Dai;y Updates Join Our whatsapp Group

ಬೆಂಗಳೂರು: ಸರಕು ಸಾಗಣೆ ವಾಹನದಲ್ಲಿ ಸಾಗಿಸುತ್ತಿದ್ದ ಬ್ರಾಯ್ಲರ್ ಕೋಳಿಗಳು ರಸ್ತೆ ಅಪಘಾತದಲ್ಲಿ ಮೃತಪಟ್ಟರೆ, ಅವುಗಳನ್ನು ‘ಜೀವಸಂಪತ್ತು’ ಹಾಗೂ ‘ಸರಕು’ ಎಂದು ಪರಿಗಣಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಅಪಘಾತದಲ್ಲಿ ಮೃತಪಟ್ಟ ಕೋಳಿಗಳಿಗೆ ವಿಮಾ ಕಂಪನಿ ಪರಿಹಾರ ನೀಡುವ ಬಾಧ್ಯತೆ ಹೊಂದಿರುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಈ ಕುರಿತು ಕೋಳಿ ಮಾಲೀಕ ಕೆ. ವೀರ ನಾರಾಯಣಸ್ವಾಮಿ ಹಾಗೂ ರಿಲಯನ್ಸ್ ಜನರಲ್ ಇನ್ಶೂರೆನ್ಸ್ ಕಂಪನಿ ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ನಡೆಸಿದ ಹೈಕೋರ್ಟ್‌ನ ಧಾರವಾಡ ಪೀಠದ ನ್ಯಾಯಮೂರ್ತಿ ಕೆ.ಬಿ. ಗೀತಾ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಕರ್ನಾಟಕ ಮೋಟಾರು ವಾಹನ ನಿಯಮಗಳಲ್ಲಿ ಕೋಳಿಗಳ ಕುರಿತು ನೇರ ಉಲ್ಲೇಖ ಇಲ್ಲದಿದ್ದರೂ, ಮೋಟಾರು ವಾಹನ ಕಾಯ್ದೆ-1988ರ ಸೆಕ್ಷನ್ 2(13)ರ ಪ್ರಕಾರ ‘ಸರಕು’ ಎಂಬ ಪದವು ಜೀವಸಂಪತ್ತನ್ನೂ ಒಳಗೊಂಡಿದೆ ಎಂದು ನ್ಯಾಯಾಲಯ ತಿಳಿಸಿದೆ. ಕೋಳಿಗಳು ಜೀವಂತ ಪ್ರಾಣಿ ಅಥವಾ ಪಕ್ಷಿಗಳಾಗಿರುವುದರಿಂದ ಅವುಗಳನ್ನು ಜೀವಸಂಪತ್ತು ಹಾಗೂ ಸರಕು ಎಂದು ಪರಿಗಣಿಸಬಹುದು ಎಂದು ಪೀಠ ಹೇಳಿದೆ.

ಬಳ್ಳಾರಿಯ ಮೋಟಾರು ವಾಹನ ಅಪಘಾತಗಳ ಪರಿಹಾರ ನ್ಯಾಯಾಧಿಕರಣ ನೀಡಿದ್ದ ₹4.51 ಲಕ್ಷ ಪರಿಹಾರ ಮೊತ್ತವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಆದರೆ, ನ್ಯಾಯಾಧಿಕರಣ ವಿಧಿಸಿದ್ದ ಶೇ.7ರ ಬಡ್ಡಿದರವನ್ನು ಶೇ.6ಕ್ಕೆ ಇಳಿಸಿ ಆದೇಶಿಸಿದೆ. ಇದೇ ವೇಳೆ, ಹೆಚ್ಚುವರಿ ಪರಿಹಾರ ಕೋರಿ ಕೆ. ವೀರ ನಾರಾಯಣಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಪ್ರಕರಣದ ಹಿನ್ನೆಲೆ

ಬಳ್ಳಾರಿಯ ಆಂಧ್ರಹಾಳ ಗ್ರಾಮದ ಬಾಲಾಜಿ ಪೌಲ್ಟ್ರಿ ಫಾರ್ಮ್ ಮಾಲೀಕರಾದ ಕೆ. ವೀರ ನಾರಾಯಣಸ್ವಾಮಿ ಅವರು 2013ರ ಜೂನ್ 18ರಂದು ಚಳ್ಳಕೆರೆ ಪೌಲ್ಟ್ರಿ ಫಾರ್ಮ್‌ನಿಂದ 2,250 ಬ್ರಾಯ್ಲರ್ ಕೋಳಿಗಳನ್ನು ಖರೀದಿಸಿದ್ದರು. ಬಳಿಕ ಅವುಗಳನ್ನು ಐಚರ್ ವಾಹನದಲ್ಲಿ ಸಾಗಿಸುತ್ತಿದ್ದ ವೇಳೆ ಜೂನ್ 19ರಂದು ಮುಂಜಾನೆ ಸುಮಾರು 4 ಗಂಟೆಗೆ ಅಯ್ಯಗರಲಪಳ್ಳಿ-ಸೆಟ್ಟೂರು ರಸ್ತೆಯಲ್ಲಿ ವಾಹನ ಅಪಘಾತಕ್ಕೀಡಾಗಿ ಪಲ್ಟಿಯಾಗಿತ್ತು.

ಅಪಘಾತದ ಪರಿಣಾಮ ಸುಮಾರು 2,000 ಕೋಳಿಗಳು ಸ್ಥಳದಲ್ಲೇ ಮೃತಪಟ್ಟಿದ್ದವು. ಉಳಿದ 250 ಕೋಳಿಗಳನ್ನು ಸ್ಥಳೀಯರು ತೆಗೆದುಕೊಂಡು ಹೋಗಿದ್ದರು ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

ಈ ಘಟನೆಯಿಂದ ಉಂಟಾದ ನಷ್ಟಕ್ಕಾಗಿ ₹5.90 ಲಕ್ಷ ಪರಿಹಾರ ನೀಡುವಂತೆ ವೀರ ನಾರಾಯಣಸ್ವಾಮಿ ಮೋಟಾರು ವಾಹನ ಅಪಘಾತಗಳ ಪರಿಹಾರ ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧಿಕರಣ, ಮೃತಪಟ್ಟ ಕೋಳಿಗಳಿಗೂ ಪರಿಹಾರ ನೀಡುವಂತೆ ಆದೇಶಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿ ರಿಲಯನ್ಸ್ ಜನರಲ್ ಇನ್ಶೂರೆನ್ಸ್ ಕಂಪನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಮತ್ತೊಂದೆಡೆ, ನ್ಯಾಯಾಧಿಕರಣ ನೀಡಿದ ಪರಿಹಾರ ಮೊತ್ತವನ್ನು ಹೆಚ್ಚಿಸುವಂತೆ ಕೋರಿ ವೀರ ನಾರಾಯಣಸ್ವಾಮಿ ಕೂಡ ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ವಿಮಾ ಕಂಪನಿ ಪರ ವಕೀಲರು, ಕೋಳಿಗಳನ್ನು ಜಾನುವಾರು ಅಥವಾ ಜೀವಸಂಪತ್ತು ಎಂದು ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ ನ್ಯಾಯಾಧಿಕರಣ ವಿಧಿಸಿರುವ ಪರಿಹಾರ ಮೊತ್ತವನ್ನು ಕಡಿಮೆ ಮಾಡಬೇಕು ಎಂದು ವಾದಿಸಿದ್ದರು.

ಇದಕ್ಕೆ ಪ್ರತಿಯಾಗಿ ವೀರ ನಾರಾಯಣಸ್ವಾಮಿ ಪರ ವಕೀಲರು, ರಸ್ತೆ ಅಪಘಾತದಲ್ಲಿ ವಾಹನ ಪಲ್ಟಿಯಾಗಿ ಬಹುತೇಕ ಎಲ್ಲ ಕೋಳಿಗಳು ಮೃತಪಟ್ಟಿದ್ದವು. ಹಲವು ಕೋಳಿಗಳನ್ನು ಸಾರ್ವಜನಿಕರು ತೆಗೆದುಕೊಂಡು ಹೋಗಿದ್ದರು. ಘಟನೆಯಿಂದ ಉಂಟಾದ ಮಾನಸಿಕ ನೋವನ್ನು ನ್ಯಾಯಾಧಿಕರಣ ಪರಿಗಣಿಸಿಲ್ಲ. ಹೀಗಾಗಿ ಹೆಚ್ಚುವರಿ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದರು.

ಎರಡೂ ಕಡೆಯ ವಾದಗಳನ್ನು ಪರಿಗಣಿಸಿದ ಹೈಕೋರ್ಟ್, ಕೋಳಿಗಳನ್ನು ಮೋಟಾರು ವಾಹನ ಕಾಯ್ದೆಯ ಅರ್ಥದಲ್ಲಿ ಜೀವಸಂಪತ್ತು ಹಾಗೂ ಸರಕು ಎಂದು ಪರಿಗಣಿಸಬಹುದು ಎಂದು ಸ್ಪಷ್ಟಪಡಿಸಿ, ನ್ಯಾಯಾಧಿಕರಣದ ₹4.51 ಲಕ್ಷ ಪರಿಹಾರ ಮೊತ್ತವನ್ನು ಎತ್ತಿಹಿಡಿದಿದೆ. ಆದರೆ ಬಡ್ಡಿದರವನ್ನು ಶೇ.7ರಿಂದ ಶೇ.6ಕ್ಕೆ ಇಳಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img