ಬೆಂಗಳೂರು: ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬಳಿ ಮೊಬೈಲ್ ಪತ್ತೆಯಾದ ಪ್ರಕರಣ ಸಂಬಂಧ ಜೈಲಧಿಕಾರಿಯನ್ನು ಸಸ್ಪೆಂಡ್ ಮಾಡಿ ಡಿಜಿಪಿ ಅಲೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಜೈಲಿನ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಈರಣ್ಣ ರಂಗಾಪುರ ಅಮಾನತುಗೊಂಡ ಅಧಿಕಾರಿ.
ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಕೈದಿಗಳು ಧರಿಸುವ ಬಿಳಿ ಬಟ್ಟೆ ಧರಿಸದೇ ಇದ್ದುದು ಹಾಗೂ ಅವರ ಬಳಿ ಆಂಡ್ರಾಯ್ಡ್ ಮೊಬೈಲ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳ ಕರ್ತವ್ಯದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಈ ಹಿನ್ನೆಲೆಯಲ್ಲಿ ಜೈಲು ಎಸ್ಪಿ ಅನ್ಶುಕುಮಾರ್ ಅವರಿಗೆ ಕರ್ತವ್ಯ ಲೋಪದ ಬಗ್ಗೆ ವಿವರಣೆ ಕೇಳಿ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.
ಸಿಸಿಬಿ ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ಸತತ 6 ಗಂಟೆಗಳ ಕಾಲ ತಪಾಸಣೆ ನಡೆಸಿದ್ದಾರೆ. ದರ್ಶನ್, ಪವಿತ್ರಾಗೌಡ, ಪ್ರಜ್ವಲ್ ರೇವಣ್ಣ ಸೇರಿದಂತೆ ಪ್ರಮುಖ ಹಾಗೂ ವಿಐಪಿ ಕೈದಿಗಳ ಬ್ಯಾರಕ್ಗಳಲ್ಲೂ ಶೋಧ ನಡೆಸಲಾಗಿದೆ.
ಈ ವೇಳೆ ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಕ್ನಲ್ಲಿ, ಹಾಸಿಗೆ ಕೆಳಗೆ ಬಚ್ಚಿಟ್ಟಿದ್ದ ಆಂಡ್ರಾಯ್ಡ್ ಮೊಬೈಲ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಜೈಲಿನೊಳಗೆ ಮೊಬೈಲ್ ಹೇಗೆ ಬಂತು ಮತ್ತು ಅದನ್ನು ಯಾರು ನೀಡಿದರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಇದಕ್ಕೂ ಮುನ್ನ ಆಗಸ್ಟ್ 6ರಂದು ಜೈಲು ಅಧಿಕಾರಿಗಳು ವಿವಿಧ ಬ್ಯಾರಕ್ಗಳಲ್ಲಿ ತಪಾಸಣೆ ನಡೆಸಿದ್ದರು. ಆ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಬಳಿ ಯಾವುದೇ ಮೊಬೈಲ್ ಪತ್ತೆಯಾಗಿರಲಿಲ್ಲ ಎನ್ನಲಾಗಿದೆ.
ಆದರೆ ಇದೀಗ ಸಿಸಿಬಿ ನಡೆಸಿದ ದಿಢೀರ್ ಶೋಧದಲ್ಲಿ ಮೊಬೈಲ್ ಪತ್ತೆಯಾಗಿರುವುದು ಜೈಲು ಭದ್ರತೆ ಹಾಗೂ ಅಧಿಕಾರಿಗಳ ಕರ್ತವ್ಯದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಪ್ರಜ್ವಲ್ ರೇವಣ್ಣ ಅವರಿಗೆ ಮೊಬೈಲ್ ಯಾರು ನೀಡಿದರು ಎಂಬುದರ ಕುರಿತು ಶೀಘ್ರ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ. ನಿಗದಿತ ಸಮಯದಲ್ಲಿ ಸಮರ್ಪಕ ಮಾಹಿತಿ ನೀಡದಿದ್ದರೆ ಅವರನ್ನು ಬೇರೆ ಬ್ಯಾರಕ್ಗೆ ಸ್ಥಳಾಂತರಿಸುವ ಸಾಧ್ಯತೆಯೂ ಇದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಇದೀಗ ಮೊಬೈಲ್ ಪತ್ತೆಯಾದ ಪ್ರಕರಣದಲ್ಲಿ ಜೈಲು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಮೊಬೈಲ್ ಜೈಲಿನೊಳಗೆ ತಲುಪಿದ ಸಂಪೂರ್ಣ ಹಿನ್ನೆಲೆಯನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.



