ವಿಜಯಸಾಕ್ಷಿ ಸುದ್ದಿ, ಗದಗ: ಬಳ್ಳಾರಿ–ಕೊಪ್ಪಳ–ಗದಗ ಜಂಕ್ಷನ್ ಮೂಲಕ ಬೆಂಗಳೂರು, ಧಾರವಾಡ ಹಾಗೂ ಹುಬ್ಬಳ್ಳಿ ಸೇರಿದಂತೆ ಪ್ರಮುಖ ನಗರಗಳಿಗೆ ಹೆಚ್ಚಿನ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ಗದಗ ಜಿಲ್ಲಾ ವಿಕಾಸ ವೇದಿಕೆ ಹಾಗೂ ಕುಷ್ಟಗಿ ಹೋರಾಟ ಸಮಿತಿ ಆಗ್ರಹಿಸಿದೆ.
ಈ ಕುರಿತು ಮಾಜಿ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಬಯ್ಯಾಪುರ ಅವರನ್ನು ಭೇಟಿ ಮಾಡಿದ ವೇದಿಕೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಕುಷ್ಟಗಿ–ಗದಗ ಜಂಕ್ಷನ್ ಮೂಲಕ ಬೆಂಗಳೂರು ಹಾಗೂ ಧಾರವಾಡಕ್ಕೆ ವಿಶೇಷ ರೈಲುಗಳನ್ನು ಆರಂಭಿಸಬೇಕು. ಸಿಂಧನೂರಿನಿಂದ ಧಾರವಾಡ–ಹುಬ್ಬಳ್ಳಿ ಮಾರ್ಗವಾಗಿ ಬೆಂಗಳೂರಿಗೆ ತೆರಳಲು ರಾತ್ರಿ ಹಾಗೂ ಮುಂಜಾನೆ ಸಮಯದಲ್ಲಿ ಹೊಸ ರೈಲು ಸೇವೆ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ದಾವಣಗೆರೆ–ಹಾವೇರಿ ಮಾರ್ಗವಾಗಿ ಹುಬ್ಬಳ್ಳಿ ತಲುಪುವ ರೈಲುಗಳ ಪೈಕಿ ಹೆಚ್ಚಿನ ರೈಲುಗಳನ್ನು ಬಳ್ಳಾರಿ–ಹೊಸಪೇಟೆ–ಕೊಪ್ಪಳ–ಗದಗ ಮಾರ್ಗವಾಗಿ ಸಂಚರಿಸುವಂತೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಬಳ್ಳಾರಿಯಿಂದ ಮುಂಜಾನೆ 6 ಗಂಟೆಯ ಬಳಿಕ ಹುಬ್ಬಳ್ಳಿ ಹಾಗೂ ವಿಜಯಪುರ ಮಾರ್ಗಕ್ಕೆ ಸಮರ್ಪಕ ರೈಲು ಸೇವೆ ಇಲ್ಲ. ಮಧ್ಯಾಹ್ನ 3.55ಕ್ಕೆ ತಿರುಪತಿ–ಹುಬ್ಬಳ್ಳಿ ರೈಲು ಇರುವುದನ್ನು ಹೊರತುಪಡಿಸಿ ಸಂಜೆ 5ರ ಬಳಿಕವೂ ರೈಲುಗಳ ಕೊರತೆ ಇದೆ. ಕೊಪ್ಪಳ–ಬಳ್ಳಾರಿ ಭಾಗವು ಕೈಗಾರಿಕೆ ಹಾಗೂ ಪ್ರವಾಸೋದ್ಯಮದ ದೃಷ್ಟಿಯಿಂದ ಮಹತ್ವ ಹೊಂದಿರುವುದರಿಂದ ಈ ಭಾಗಕ್ಕೆ ಹೆಚ್ಚಿನ ರೈಲು ಸೌಲಭ್ಯ ಕಲ್ಪಿಸುವ ಅಗತ್ಯವಿದೆ ಎಂದು ಮುಖಂಡರು ತಿಳಿಸಿದರು.
ಗದಗ ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪೂರ, ವೀರಭದ್ರಪ್ಪ ಕಬ್ಬಿಣದ, ವೆಂಕಟೇಶ ಕಬಾಡಿ, ಬಸವರಾಜ ಜರತಖನ್ನಿ, ಕುಷ್ಟಗಿ ಹೋರಾಟ ಸಮಿತಿಯ ವೀರೇಶ ಬಂಗಾರಶೆಟ್ಟರ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಮಹಾಲಿಂಗಪುರ, ಭರತೇಶ ಜೋಷಿ, ಶ್ರೀಧರ ಘೋರ್ಪಡೆ, ಮಹಾಂತಯ್ಯ ಅರಳೆಲೆಮಠ, ಶರಣಪ್ಪ ಲಿಂಗಶೆಟ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮನವಿಗೆ ಸ್ಪಂದಿಸಿದ ಅಮರೇಗೌಡ ಬಯ್ಯಾಪುರ
ಕೊಪ್ಪಳ ಹಾಗೂ ಬಳ್ಳಾರಿ ಲೋಕಸಭಾ ಸದಸ್ಯರ ಗಮನಕ್ಕೆ ಸಮಸ್ಯೆಯನ್ನು ತಂದು ಈ ಭಾಗಕ್ಕೆ ಹೆಚ್ಚಿನ ರೈಲ್ವೆ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡುವುದಾಗಿ ಭರವಸೆ ನೀಡಿದರು. ತಾವು ಕುಷ್ಟಗಿ ಮಾಜಿ ಶಾಸಕರಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಗಮನಕ್ಕೂ ಈ ವಿಷಯವನ್ನು ತರುವುದಾಗಿ ತಿಳಿಸಿದರು.



