ಹಾಸನ: ಬಗರ್ ಹುಕುಂ ಭೂ ಮಂಜೂರಾತಿ ಯೋಜನೆಗೆ ಸಂಬಂಧಿಸಿದ ಅಕ್ರಮ ಆರೋಪ ಪ್ರಕರಣದಲ್ಲಿ ಬಂಧಿತರಾಗಿದ್ದ ಬೇಲೂರು ಕ್ಷೇತ್ರದ ಜೆಡಿಎಸ್ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಅವರಿಗೆ ನ್ಯಾಯಾಲಯ ಜಾಮೀನು ನೀಡಿದ್ದು, 52 ದಿನಗಳ ಜೈಲುವಾಸದ ಬಳಿಕ ಅವರು ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ. ಬಿಡುಗಡೆ ವೇಳೆ ಬೆಂಬಲಿಗರು ಭವ್ಯ ಸ್ವಾಗತ ಕೋರಿದ್ದು, ಮಾಜಿ ಶಾಸಕರು ತಮ್ಮ ವಿರುದ್ಧದ ಆರೋಪಗಳನ್ನು ಮತ್ತೊಮ್ಮೆ ನಿರಾಕರಿಸಿದ್ದಾರೆ.
ಸಿಐಡಿ ದಾಖಲಿಸಿದ್ದ ಪ್ರಕರಣದಲ್ಲಿ ಬಂಧಿತರಾಗಿದ್ದ ಕೆ.ಎಸ್. ಲಿಂಗೇಶ್ ಅವರಿಗೆ ಮಂಗಳವಾರ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಅಗತ್ಯ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಬುಧವಾರ ರಾತ್ರಿ ಅವರು ಜೈಲಿನಿಂದ ಹೊರಬಂದರು.
ಕಾರಾಗೃಹದ ಹೊರಗೆ ನೆರೆದಿದ್ದ ಜೆಡಿಎಸ್ ಕಾರ್ಯಕರ್ತರು ಹಾಗೂ ಬೆಂಬಲಿಗರು ಹೂವಿನ ಹಾರ ಹಾಕಿ, ಹೆಗಲ ಮೇಲೆ ಹೊತ್ತುಕೊಂಡು ಜಯಘೋಷಗಳೊಂದಿಗೆ ಸ್ವಾಗತಿಸಿದರು. ಬಿಡುಗಡೆಯಾದ ಮಾಜಿ ಶಾಸಕನನ್ನು ಅಭಿನಂದಿಸಲು ನೂರಾರು ಬೆಂಬಲಿಗರು ಆಗಮಿಸಿದ್ದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೆ.ಎಸ್. ಲಿಂಗೇಶ್, “ನಮ್ಮ ವೈರಿಗೂ ಇಂತಹ ಪರಿಸ್ಥಿತಿ ಬರಬಾರದು. ನಾನು ಮಾಡದ ತಪ್ಪಿಗೆ 52 ದಿನ ಜೈಲು ಶಿಕ್ಷೆ ಅನುಭವಿಸಿದ್ದೇನೆ. 1988ರಲ್ಲಿ ಅರ್ಜಿ ಸಲ್ಲಿಸಿದ್ದ ಅರ್ಹ ಫಲಾನುಭವಿಗಳಿಗೆ ಭೂಮಿ ಮಂಜೂರು ಮಾಡಿದ್ದೇವೇ ಹೊರತು ಯಾವುದೇ ಅಕ್ರಮ ನಡೆದಿಲ್ಲ” ಎಂದು ಸ್ಪಷ್ಟಪಡಿಸಿದರು. ತಮ್ಮ ವಿರುದ್ಧದ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಪುನರುಚ್ಚರಿಸಿದ ಅವರು, ಕಾನೂನಿನ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದರು.



