ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಶಂಕಿತ ಉಗ್ರನನ್ನು ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಅಸಾಫುಲ್ ಮಲ್ಲಿಕ್ ಎಂಬಾತನನ್ನು ಹೆಬ್ಬಗೋಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಪಾಕಿಸ್ತಾನ ಸೇನೆ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ನಿಷೇಧಿತ ಉಗ್ರ ಸಂಘಟನೆ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ ಸಂಪರ್ಕ ಸಾಧಿಸಲು ಆರೋಪಿ ಯತ್ನಿಸಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಅಫ್ಘಾನಿಸ್ತಾನ ಮೂಲದ ಇಮ್ರಾನ್ ಸೈದರ್ ಎಂಬಾತನೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕ ಬೆಳೆಸಿದ್ದ ಎನ್ನಲಾಗಿದೆ.
ಆರೋಪಿ ಅಫ್ಘಾನಿಸ್ತಾನಕ್ಕೆ ತೆರಳಲು ವೀಸಾಗೆ ಅರ್ಜಿ ಸಲ್ಲಿಸಿದ್ದರೂ, ಕುಟುಂಬದ ಕಾರಣ ಹಾಗೂ ಇತರ ತೊಂದರೆಗಳಿಂದ ಆ ಯೋಜನೆಯನ್ನು ಕೈಬಿಟ್ಟಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಮೊಬೈಲ್ ಪರಿಶೀಲನೆಯಲ್ಲಿ ಬಯಲಾದ ಮಾಹಿತಿ:
ಆರೋಪಿಯ ಮೊಬೈಲ್, ವಾಟ್ಸಾಪ್ ಹಾಗೂ ಫೇಸ್‌ಬುಕ್ ಖಾತೆಗಳನ್ನು ಪರಿಶೀಲಿಸಿದ ವೇಳೆ ಇಮ್ರಾನ್ ಸೈದರ್ ಜೊತೆಗಿನ ಚಾಟಿಂಗ್, ಹಲವು ವಾಯ್ಸ್ ಕಾಲ್‌ಗಳು ಮತ್ತು ಆಡಿಯೋ ಸಂದೇಶಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಅಸಾಫುಲ್ ಮಲ್ಲಿಕ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ಬಂಧಿತ ಆರೋಪಿ ಹೆಬ್ಬಗೋಡಿ ಸಮೀಪದ ಖಾಸಗಿ ಕಂಪನಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.



