ಬೆಂಗಳೂರು: ‘ಟಾಕ್ಸಿಕ್’ ಸಿನಿಮಾದ ‘ತಬಾಹಿ’ ಹಾಡಿನ ಬೋಲ್ಡ್ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಸೃಷ್ಟಿಸಿದ್ದ ವಿವಾದಕ್ಕೆ ರಾಕಿಂಗ್ ಸ್ಟಾರ್ ಯಶ್ ಇದೀಗ ನೇರ ಉತ್ತರ ನೀಡಿದ್ದಾರೆ. ಹಾಡಿನಲ್ಲಿ ಅಶ್ಲೀಲತೆ ಇದೆ ಎಂಬ ಟೀಕೆಗೆ ಪ್ರತಿಕ್ರಿಯಿಸಿರುವ ಅವರು, ಯಾವುದೇ ಮಿತಿಯನ್ನು ಮೀರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್, ಅಶ್ಲೀಲತೆಯನ್ನು ತಾವು ತಪ್ಪು ಎಂದು ಪರಿಗಣಿಸುತ್ತಾರೆ. ಆದರೆ ‘ತಬಾಹಿ’ ಹಾಡಿನ ದೃಶ್ಯಗಳನ್ನು ಆ ರೀತಿಯಲ್ಲಿ ನೋಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
‘ನಾವು ಯಾವುದೇ ಗೆರೆ ದಾಟಿಲ್ಲ. ನಾನು ಕಿಯಾರಾಗೆ ಕಿಸ್ ಕೂಡ ಮಾಡಿಲ್ಲ. ಹಾಡಿನ ಪ್ರತಿಯೊಂದು ದೃಶ್ಯವನ್ನು ಕಲಾತ್ಮಕ ದೃಷ್ಟಿಕೋನದಿಂದ ಚಿತ್ರೀಕರಿಸಲಾಗಿದೆ’ ಎಂದು ಯಶ್ ಸ್ಪಷ್ಟಪಡಿಸಿದ್ದಾರೆ.
ಸಿನಿಮಾದಲ್ಲಿ ಯಾವುದೇ ದೃಶ್ಯವನ್ನು ಸುಮ್ಮನೆ ಸೇರಿಸುವುದಿಲ್ಲ. ಪ್ರತಿಯೊಂದು ದೃಶ್ಯಕ್ಕೂ ಕಥೆಯೊಳಗೆ ಒಂದು ಉದ್ದೇಶ ಮತ್ತು ಭಾವನಾತ್ಮಕ ಅರ್ಥವಿರುತ್ತದೆ. ಸಂಪೂರ್ಣ ಸಿನಿಮಾವನ್ನು ನೋಡಿದಾಗ ಈ ದೃಶ್ಯಗಳ ಹಿಂದಿನ ಉದ್ದೇಶ ಪ್ರೇಕ್ಷಕರಿಗೆ ಅರ್ಥವಾಗುತ್ತದೆ ಎಂದು ಅವರು ಹೇಳಿದ್ದಾರೆ.
‘ಟಾಕ್ಸಿಕ್’ ಕೇವಲ ಮನರಂಜನೆಯ ಸಿನಿಮಾ ಮಾತ್ರವಲ್ಲ. ಇಂದಿನ ಯುವಜನರ ಮನಸ್ಥಿತಿ, ಹಿರಿಯರೊಂದಿಗೆ ಅವರ ಸಂಭಾಷಣೆ, ಸಮಾಜದ ಹಳೆಯ ಕಟ್ಟುಪಾಡುಗಳ ಕುರಿತು ಅವರು ಕೇಳುವ ಪ್ರಶ್ನೆಗಳು ಹಾಗೂ ಹೊಸ ತಲೆಮಾರಿನ ಆಲೋಚನೆಗಳನ್ನು ಕಥೆಯ ಮೂಲಕ ಪ್ರತಿಬಿಂಬಿಸುವ ಪ್ರಯತ್ನ ಮಾಡಲಾಗಿದೆ ಎಂದು ಯಶ್ ತಿಳಿಸಿದ್ದಾರೆ.
ಹೀಗಾಗಿ ‘ತಬಾಹಿ’ ಹಾಡಿನ ಕೆಲ ದೃಶ್ಯಗಳನ್ನು ಆಧರಿಸಿ ಸಿನಿಮಾವನ್ನು ನಿರ್ಧರಿಸಬಾರದು. ಸಿನಿಮಾದ ಸಂಪೂರ್ಣ ಕಥೆ ಮತ್ತು ಅದರ ಸೃಜನಶೀಲ ಉದ್ದೇಶವನ್ನು ಗಮನಿಸಿದಾಗ ವಿವಾದಕ್ಕೆ ಕಾರಣವಾದ ದೃಶ್ಯಗಳ ಹಿನ್ನೆಲೆ ಸ್ಪಷ್ಟವಾಗಲಿದೆ ಎಂಬುದು ಯಶ್ ಅವರ ನಿಲುವಾಗಿದೆ.



