ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಯುವಜನತೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಯುವಕರು ತಮ್ಮ ಜ್ಞಾನ, ಪ್ರತಿಭೆ, ಶಕ್ತಿ ಹಾಗೂ ಸೃಜನಶೀಲತೆಯನ್ನು ದೇಶದ ಅಭಿವೃದ್ಧಿಗೆ ಸಮರ್ಪಿಸುವ ಸಂಕಲ್ಪ ಮಾಡಬೇಕು. ಯುವಕರಲ್ಲಿ ರಾಷ್ಟ್ರಪ್ರೇಮ, ಸಾಮಾಜಿಕ ಜವಾಬ್ದಾರಿ, ಸೇವಾ ಮನೋಭಾವ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವ ಮೂಲಕ ನವ ಭಾರತದ ನಿರ್ಮಾಣದ ಕನಸನ್ನು ನನಸಾಗಿಸಬಹುದು ಎಂದು ಶಿಕ್ಷಕ ಹಾಗೂ ವಾಗ್ಮಿ ಕಿರಣ ರಾಮ್ ಹೇಳಿದರು.
ಪಟ್ಟಣದ ಶ್ರೀಮತಿ ಕಮಲಾ ಮತ್ತು ಶ್ರೀ ವೆಂಕಪ್ಪ ಎಂ. ಅಗಡಿ ಇಂಜಿನಿಯರಿಂಗ್ ಮಹಾವಿದ್ಯಾಲಯದಲ್ಲಿ ಎನ್ಎಸ್ಎಸ್ ಘಟಕದ 2026–27ನೇ ಸಾಲಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಭಾರತ ಅಪಾರ ಯುವಶಕ್ತಿಯನ್ನು ಹೊಂದಿರುವ ರಾಷ್ಟ್ರವಾಗಿದೆ. ಈ ಶಕ್ತಿಯನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವುದು ವ್ಯಕ್ತಿತ್ವ ನಿರ್ಮಾಣದ ಜತೆಗೆ ರಾಷ್ಟ್ರ ನಿರ್ಮಾಣಕ್ಕೂ ಅಗತ್ಯವಾಗಿದೆ ಎಂದರು.
ಗುಣಮಟ್ಟದ ಶಿಕ್ಷಣದ ಜತೆಗೆ ಕೌಶಲ್ಯಾಭಿವೃದ್ಧಿ, ನವೋದ್ಯಮ, ಉದ್ಯಮಶೀಲತೆ, ತಂತ್ರಜ್ಞಾನ ಜ್ಞಾನ, ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಸೇವೆಯಲ್ಲಿ ಯುವಕರು ತೊಡಗಿಸಿಕೊಳ್ಳಬೇಕು. ಜ್ಞಾನ ಮತ್ತು ಪ್ರತಿಭೆಯನ್ನು ಸಮಾಜದ ಅಭಿವೃದ್ಧಿಗೆ ಬಳಸುವ ಮೂಲಕ ದೇಶದ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪರಶುರಾಮ ಬಾರಕಿ ಮಾತನಾಡಿ, ಸ್ವಚ್ಛತೆ, ಪರಿಸರ ಸಂರಕ್ಷಣೆ, ರಕ್ತದಾನ, ಗ್ರಾಮೀಣ ಅಭಿವೃದ್ಧಿ, ಸಾಕ್ಷರತೆ, ಸಾಮಾಜಿಕ ಜಾಗೃತಿ, ರಾಷ್ಟ್ರೀಯ ಏಕತೆ ಸೇರಿದಂತೆ ವಿವಿಧ ಸೇವಾ ಚಟುವಟಿಕೆಗಳಲ್ಲಿ ಯುವಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.
ಎನ್ಎಸ್ಎಸ್ ಘಟಕವು ಯುವಕರಲ್ಲಿ ಸ್ವಯಂಸೇವಾ ಮನೋಭಾವ, ನಾಯಕತ್ವ, ಅನುಭವಾಧಾರಿತ ಕಲಿಕೆ ಹಾಗೂ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸಲು ಉತ್ತಮ ವೇದಿಕೆಯಾಗಿದೆ. ಜ್ಞಾನ, ಕೌಶಲ್ಯ ಮತ್ತು ಮೌಲ್ಯಗಳ ಸಮನ್ವಯವೇ ಯುವ ಸಂಕಲ್ಪದ ಆಧಾರ. ಪ್ರಾಮಾಣಿಕತೆ, ಶಿಸ್ತು, ಸಮಯಪಾಲನೆ, ಪರಿಶ್ರಮ, ಸಹಬಾಳ್ವೆ, ಮಾನವೀಯತೆ ಹಾಗೂ ದೇಶಪ್ರೇಮವನ್ನು ಜೀವನದಲ್ಲಿ ಅಳವಡಿಸಿಕೊಂಡ ಯುವಜನತೆ ಬಲಿಷ್ಠ ಸಮಾಜದ ನಿರ್ಮಾತೃಗಳಾಗುತ್ತಾರೆ ಎಂದು ಹೇಳಿದರು.
ಸಮಾರಂಭದಲ್ಲಿ ಮಹಾವಿದ್ಯಾಲಯದ ಆಡಳಿತಾಧಿಕಾರಿ ಪ್ರೊ. ವಿಕ್ರಂ ಶಿರೋಳ್, ಪ್ರಥಮ ವರ್ಷದ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಗಿರೀಶ್ ಯತ್ತಿನಹಳ್ಳಿ, ಪ್ರೊ. ದಯಾನಂದ ಬಡಿಗಣ್ಣವರ, ಎನ್ಎಸ್ಎಸ್ ಅಧಿಕಾರಿ ಪ್ರೊ. ಸೋಮಶೇಖರ ಕೆರಿಮನಿ, ಪ್ರೊ. ಷಣ್ಮುಖ ಜಿ. ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಎನ್ಎಸ್ಎಸ್ ಘಟಕಕ್ಕೆ ಸ್ವಾಗತಿಸಲಾಯಿತು. ಸ್ವಯಂಸೇವಕರಾದ ಅಭಿಷೇಕ ಕಣವಿ, ಶ್ರೀಲಕ್ಷ್ಮಿ ಪಾಟೀಲ್, ಸ್ಮಿತಾ ದಳವಾಯಿ, ಅಕ್ಷತಾ ಹಡಪದ ಹಾಗೂ ಚೇತನ್ ಗಣೇಶ್ ಬನ್ನಿಮಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ನಾನು ಬದಲಾಗುತ್ತೇನೆ–ಸಮಾಜವನ್ನು ಬದಲಾಯಿಸುತ್ತೇನೆ ಎಂಬ ಸಂಕಲ್ಪದೊಂದಿಗೆ ಯುವಕರು ಮುನ್ನಡೆಯಬೇಕು. ತಮ್ಮ ಸಾಮರ್ಥ್ಯವನ್ನು ವೈಯಕ್ತಿಕ ಯಶಸ್ಸಿಗೆ ಮಾತ್ರ ಸೀಮಿತಗೊಳಿಸದೆ ಸಮಾಜದ ಒಳಿತಿಗೂ ಬಳಸಿದಾಗ ಯುವಶಕ್ತಿಯ ನಿಜವಾದ ಅರ್ಥ ಸಾರ್ಥಕವಾಗುತ್ತದೆ.
— ಕಿರಣ ರಾಮ್, ಶಿಕ್ಷಕ ಹಾಗೂ ವಾಗ್ಮಿ



