ಬೆಂಗಳೂರು: ಕುಟುಂಬದ ಆರೈಕೆ ಮತ್ತು ಜವಾಬ್ದಾರಿಗಳನ್ನು ಹೊರುವ ‘ಹೋಮ್‌ಮೇಕರ್’ ಎಂಬ ಪದವು ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ, ಅದು ಸಂಪೂರ್ಣವಾಗಿ ಲಿಂಗತಟಸ್ಥ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಪುರುಷನಾಗಲಿ, ಮಹಿಳೆಯಾಗಲಿ ಅಥವಾ ಉದ್ಯೋಗದಲ್ಲಿರುವ ವೃತ್ತಿಪರರಾಗಲಿ, ಮನೆಯಲ್ಲಿ ಕುಟುಂಬದ ಕಲ್ಯಾಣಕ್ಕಾಗಿ ಶ್ರಮಿಸುವ ಪ್ರತಿಯೊಬ್ಬರೂ ‘ಗೃಹ ನಿರ್ವಾಹಕರು’ ಎಂದು ಪರಿಗಣಿಸಲ್ಪಡುತ್ತಾರೆ ಎಂದು ನ್ಯಾಯಾಲಯ ತಿಳಿಸಿದೆ.
ರಸ್ತೆ ಅಪಘಾತದಲ್ಲಿ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗಿದ್ದ ಮಹಿಳೆಗೆ ಮೋಟಾರು ಅಪಘಾತಗಳ ಪರಿಹಾರ ನ್ಯಾಯಾಧಿಕರಣ ನೀಡಿದ್ದ ಪರಿಹಾರ ಮೊತ್ತ ಹೆಚ್ಚಳ ಮಾಡುವಂತೆ ಕೋರಿ ಪಶ್ಚಿಮ ಬಂಗಾಳ ಮೂಲದ ಪಂಪಪಾಲ್ ಎಂಬ ಮಹಿಳೆ ಹಾಗೂ ಪರಿಹಾರ ಘೋಷಣೆಯನ್ನು ಪ್ರಶ್ನಿಸಿ ಕೆಎಸ್‌ಆರ್‌ಟಿಸಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳನ್ನು ಜಂಟಿಯಾಗಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ.ಚಿಲಕೂರು ಸುಮಲತಾ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿತು.
ಉನ್ನತ ಶಿಕ್ಷಣ ಅಥವಾ ವೃತ್ತಿಪರ ಹಿನ್ನೆಲೆ ಹೊಂದಿರುವ ಮಾತ್ರಕ್ಕೆ ಯಾರೂ ಗೃಹಿಣಿಯಾಗಿರಲು ಅನರ್ಹರಾಗುವುದಿಲ್ಲ ಎಂದ ಪೀಠ, ಪದವಿ, ಸ್ನಾತಕೋತ್ತರ ಪದವಿ ಅಥವಾ ಡಾಕ್ಟರೇಟ್ ಪಡೆದಿದ್ದರೂ ಸಹ ಅವರು ಕುಟುಂಬಕ್ಕಾಗಿ ನೀಡುವ ಸೇವೆಗಳ ಮೌಲ್ಯ ಕಡಿಮೆಯಾಗುವುದಿಲ್ಲ ಎಂದು ಹೇಳಿತು. ಗೃಹ ನಿರ್ವಾಹಕರೆಂದರೆ ಕೇವಲ ಅನಕ್ಷರಸ್ಥರಾಗಿರಬೇಕು, ದಿನದ 24 ಗಂಟೆಯೂ ಮನೆಯಲ್ಲೇ ಇರಬೇಕು ಅಥವಾ ಕೇವಲ ಮನೆಕೆಲಸಗಳನ್ನೇ ಮಾಡಬೇಕು ಎಂಬ ಹಳೆಯ ಸಾಂಪ್ರದಾಯಿಕ ಕಲ್ಪನೆ ತಪ್ಪು ಎಂದು ಪೀಠ ಸ್ಪಷ್ಟಪಡಿಸಿತು.
ಅವಿಶ್ರಾಂತವಾಗಿ ಶ್ರಮಿಸುತ್ತಾ, ಬೇಷರತ್ ಪ್ರೀತಿ ತೋರುತ್ತಾ, ವೈಯಕ್ತಿಕ ಹಿತಾಸಕ್ತಿಗಳನ್ನು ತ್ಯಾಗ ಮಾಡಿ ಕುಟುಂಬದ ಸುಖ-ಶಾಂತಿಗೆ ಆಧಾರಸ್ತಂಭವಾಗಿ ನಿಲ್ಲುವ ಪ್ರತಿಯೊಬ್ಬ ವ್ಯಕ್ತಿಯೂ ಗೃಹಿಣಿಯೇ ಆಗಿದ್ದಾರೆ, ಇದು ಪುರುಷರಿಗೂ ಹಾಗೂ ದುಡಿಯುವ ಉದ್ಯೋಗಸ್ಥರಿಗೂ ಅನ್ವಯಿಸುತ್ತದೆ ಎಂದು ಪೀಠ ತಿಳಿಸಿತು.
ಅರ್ಜಿದಾರರು ಮಾಡಿಸಿಕೊಂಡಿದ್ದ ವೈದ್ಯಕೀಯ ವಿಮೆಯಿಂದ ಆಸ್ಪತ್ರೆ ಖರ್ಚು ಮರುಪಾವತಿಯಾಗಿದ್ದು, ಈ ಪ್ರೀಮಿಯಂ ಹಣವನ್ನು ಗ್ರಾಹಕರೇ ಪಾವತಿಸಿರುವುದರಿಂದ ಆ ಮೊತ್ತವನ್ನು ದ್ವಿ ಲಾಭ ಎಂದು ಪರಿಗಣಿಸಿ ಪರಿಹಾರ ಮೊತ್ತದಲ್ಲಿ ಕಡಿತ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಪೀಠ ತಿಳಿಸಿದೆ. ಅಪಘಾತಕ್ಕೆ ಒಳಗಾಗಿದ್ದ ಮಹಿಳೆಗೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿಗದಿಪಡಿಸಿರುವ ಕಾಲ್ಪನಿಕ ಆದಾಯ ಪರಿಗಣಿಸಿ ಮಾಸಿಕ ₹8,000ರಂತೆ ಪರಿಹಾರ ನೀಡಿದ್ದು, ನ್ಯಾಯಾಧಿಕರಣ ನೀಡಿದ್ದ ಪರಿಹಾರಕ್ಕೆ ₹1,96,800 ಹೆಚ್ಚಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಸಂತ್ರಸ್ತ ಮಹಿಳೆ 2013ರ ಅಕ್ಟೋಬರ್ 19ರಂದು ಬೆಂಗಳೂರಿನಿಂದ ಮಡಿಕೇರಿಗೆ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಬಸ್ ಲಾರಿಗೆ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಅರ್ಜಿದಾರ ಪಂಪಪಾಲ್ ಅವರು ಶಾಶ್ವತ ದೈಹಿಕ ವೈಕಲ್ಯಕ್ಕೆ ಒಳಗಾಗಿ ಚಿಕಿತ್ಸೆಗಾಗಿ ₹10 ಲಕ್ಷದವರೆಗೂ ವೆಚ್ಚ ಮಾಡಿದ್ದರು. ಬೆಂಗಳೂರಿನ ಮೋಟಾರು ವಾಹನಗಳ ಪರಿಹಾರ ನ್ಯಾಯಾಧಿಕರಣ ವೈದ್ಯಕೀಯ ವೆಚ್ಚ ಸೇರಿ ಒಟ್ಟು ₹4,55,243 ಪರಿಹಾರ ಘೋಷಿಸಿತ್ತು, ಇದನ್ನು ಪ್ರಶ್ನಿಸಿ ಕೆಎಸ್‌ಆರ್‌ಟಿಸಿ ಮತ್ತು ಸಂತ್ರಸ್ತೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಬಯೋಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅರ್ಜಿದಾರರು ಅಪಘಾತಕ್ಕೂ ಮುನ್ನ ಅತಿಥಿ ಉಪನ್ಯಾಸಕರಾಗಿ ಮಾಸಿಕ ₹35 ಸಾವಿರದವರೆಗೂ ದುಡಿಯುತ್ತಿದ್ದರು, ಘಟನೆ ನಡೆದ ದಿನ ಗೃಹಿಣಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು. ಇದಕ್ಕೆ ಆಕ್ಷೇಪಿಸಿದ್ದ ಕೆಎಸ್‌ಆರ್‌ಟಿಸಿ ಪರ ವಕೀಲರು, ಅರ್ಜಿದಾರರು ಉನ್ನತ ಶಿಕ್ಷಣ ಪಡೆದವರಾಗಿರುವುದರಿಂದ ಗೃಹಿಣಿಯಾಗಿರುವುದಕ್ಕೆ ಅವಕಾಶವಿಲ್ಲ, ಆದ್ದರಿಂದ ಭವಿಷ್ಯದ ನಷ್ಟಕ್ಕೆ ಪರಿಹಾರ ನೀಡಲಾಗದು ಎಂದು ವಾದಿಸಿದ್ದರು.



