ದಾವಣಗೆರೆ: ಷೇರು ಮಾರುಕಟ್ಟೆಯಲ್ಲಿ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಮನೆ ತೊರೆದಿರಬಹುದೇ ಎಂಬ ಅನುಮಾನ ಮೂಡಿಸಿರುವ ಪ್ರಕರಣವೊಂದು ದಾವಣಗೆರೆಯಲ್ಲಿ ನಡೆದಿದೆ. ಬೆಂಗಳೂರಿಗೆ ತೆರಳಿ ಬರುವುದಾಗಿ ಪೋಷಕರಿಗೆ ತಿಳಿಸಿದ್ದ ದಂಪತಿ, ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಇದೀಗ ನಾಪತ್ತೆಯಾಗಿದ್ದಾರೆ.
ಬನಶಂಕರಿ ಬಡಾವಣೆಯ ನಿವಾಸಿಗಳಾದ ರಮೇಶ್ ಕುಮಾರ್ (38), ಪತ್ನಿ ಜಯಶೀಲ (36), ಪುತ್ರ ಹಿತೇಶ್ (9) ಹಾಗೂ ಪುತ್ರಿ ಪ್ರೇರಣ (3) ಕಾಣೆಯಾಗಿದ್ದಾರೆ. ರಮೇಶ್ ಕುಮಾರ್ ಷೇರು ಮಾರುಕಟ್ಟೆ ಹೂಡಿಕೆ ವ್ಯವಹಾರ ನಡೆಸುತ್ತಿದ್ದು, ಸಾರ್ವಜನಿಕರಿಂದ ಹಣ ಪಡೆದು ಹೂಡಿಕೆ ಮಾಡುತ್ತಿದ್ದರು ಎನ್ನಲಾಗಿದೆ.
ಇತ್ತೀಚೆಗೆ ಷೇರು ಮಾರುಕಟ್ಟೆಯಲ್ಲಿ ಭಾರಿ ನಷ್ಟವಾಗಿತ್ತು ಎನ್ನಲಾಗಿದ್ದು, ಕುಟುಂಬದ ನಾಪತ್ತೆಗೂ ಇದಕ್ಕೂ ಸಂಬಂಧವಿದೆಯೇ ಎಂಬ ಕೋನದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆಗಸ್ಟ್ 14ರಂದು ರಮೇಶ್ ಕುಮಾರ್ ಪೋಷಕರಿಗೆ ಕರೆ ಮಾಡಿ ಬೆಂಗಳೂರಿಗೆ ವೈಯಕ್ತಿಕ ಕೆಲಸದ ನಿಮಿತ್ತ ತೆರಳುವುದಾಗಿ ಹೇಳಿದ್ದರು. ಬಳಿಕ ಕುಟುಂಬ ತಮ್ಮ ಕಾರು ಮತ್ತು ಬೈಕ್ಗಳನ್ನು ಮನೆಯಲ್ಲೇ ಬಿಟ್ಟು ಆಟೋ ಮೂಲಕ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ತೆರಳಿದೆ ಎನ್ನಲಾಗಿದೆ.
ಬೆಂಗಳೂರಿಗೆ ತೆರಳಿದ ನಂತರ ನಾಲ್ವರೂ ಕುಟುಂಬಸ್ಥರ ಸಂಪರ್ಕಕ್ಕೆ ಸಿಕ್ಕಿಲ್ಲ. ಎಲ್ಲರ ಮೊಬೈಲ್ಗಳು ಸ್ವಿಚ್ಆಫ್ ಆಗಿರುವುದರಿಂದ ಆತಂಕಗೊಂಡ ಕುಟುಂಬಸ್ಥರು ಬೆಂಗಳೂರು ಸೇರಿದಂತೆ ವಿವಿಧೆಡೆ ಹುಡುಕಾಟ ನಡೆಸಿದ್ದಾರೆ. ಆದರೆ ಇದುವರೆಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ.
ನಾಲ್ವರು ನಾಪತ್ತೆಯಾಗಿರುವ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕುಟುಂಬದ ಪ್ರಯಾಣದ ಮಾರ್ಗ, ಕೊನೆಯ ಮೊಬೈಲ್ ಲೊಕೇಶನ್ ಹಾಗೂ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.
ಕುಟುಂಬದ ನಾಪತ್ತೆಗೆ ನಿಖರ ಕಾರಣವೇನು, ಅವರು ಬೆಂಗಳೂರಿಗೆ ತೆರಳಿದ್ದಾರೆಯೇ ಅಥವಾ ಬೇರೆಡೆಗೆ ಪ್ರಯಾಣಿಸಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



