ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಬರುವ ದೇವಿಮನೆ ಘಾಟ್ ಪ್ರದೇಶದಲ್ಲಿ ಭಾರಿ ಮಳೆಗೆ ಮತ್ತೆ ಗುಡ್ಡ ಕುಸಿದಿದೆ.
ರಾತ್ರಿಯಿಂದ ಮುಂಜಾನೆಯವರೆಗೆ ಸುರಿದ ಧಾರಾಕಾರ ಮಳೆಯಿಂದ ಹೆದ್ದಾರಿಯ ಒಂದು ಬದಿಯ ಗುಡ್ಡದ ಮಣ್ಣು ರಸ್ತೆಗೆ ಕುಸಿದುಬಿದ್ದಿದೆ.
ಗುಡ್ಡ ಕುಸಿತದಿಂದ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರಲ್ಲಿ ಆತಂಕ ಮೂಡಿದೆ. ರಸ್ತೆಗೆ ಮಣ್ಣು ಬಿದ್ದಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗುವ ಸಾಧ್ಯತೆ ಇದ್ದು, ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಸೂಚಿಸಲಾಗಿದೆ.
ಕೆಲವು ತಿಂಗಳ ಹಿಂದಷ್ಟೇ ಇದೇ ದೇವಿಮನೆ ಘಾಟ್ ಪ್ರದೇಶದಲ್ಲಿ ಭಾರಿ ಭೂಕುಸಿತ ಸಂಭವಿಸಿ ಹೆದ್ದಾರಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಇದೀಗ ಮುಂಗಾರು ಮಳೆ ಮತ್ತೆ ಚುರುಕಾಗಿರುವ ಹಿನ್ನೆಲೆಯಲ್ಲಿ ಘಟ್ಟ ಪ್ರದೇಶದಲ್ಲಿ ಸರಣಿ ಭೂಕುಸಿತಗಳು ಸಂಭವಿಸುವ ಆತಂಕ ಎದುರಾಗಿದೆ.
ಸ್ಥಳೀಯ ಆಡಳಿತ ಹಾಗೂ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ಸ್ಥಳಕ್ಕೆ ತೆರಳಿ ರಸ್ತೆಗೆ ಬಿದ್ದಿರುವ ಮಣ್ಣು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಗುಡ್ಡ ಕುಸಿತದ ಹಿನ್ನೆಲೆಯಲ್ಲಿ ದೇವಿಮನೆ ಘಾಟ್ ಮೂಲಕ ಸಂಚರಿಸುವ ವಾಹನ ಸವಾರರು ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.



