HomeKarnataka Newsಬೆಂಗಳೂರಿನ ಖಾಲಿ ನಿವೇಶನಗಳಿಗೆ ನೋಟಿಸ್‌: ತ್ವರಿತ ಸ್ವಚ್ಛತಾ ಕಾರ್ಯಕ್ಕೆ ಕೃಷ್ಣ ಬೈರೇಗೌಡ ಸೂಚನೆ

ಬೆಂಗಳೂರಿನ ಖಾಲಿ ನಿವೇಶನಗಳಿಗೆ ನೋಟಿಸ್‌: ತ್ವರಿತ ಸ್ವಚ್ಛತಾ ಕಾರ್ಯಕ್ಕೆ ಕೃಷ್ಣ ಬೈರೇಗೌಡ ಸೂಚನೆ

For Dai;y Updates Join Our whatsapp Group

ಬೆಂಗಳೂರು: ನಗರದ ಐದೂ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸ್ವಚ್ಛಗೊಳಿಸಬೇಕಾದ ಖಾಲಿ ನಿವೇಶನಗಳನ್ನು ಗುರುತಿಸಿ, ಮಾಲೀಕರಿಗೆ ನೋಟಿಸ್‌ ನೀಡಿ ತ್ವರಿತವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಖಾಲಿ ನಿವೇಶನಗಳ ಸ್ವಚ್ಛತಾ ಕಾರ್ಯಕ್ಕೆ ಸಂಬಂಧಿಸಿದಂತೆ ಸೋಮವಾರ ನಡೆದ ವರ್ಚುವಲ್‌ ಸಭೆಯಲ್ಲಿ ಮಾತನಾಡಿದ ಸಚಿವರು, ನಿವೇಶನಗಳ ಮಾಲೀಕರು ಸ್ವತಃ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಆಗಸ್ಟ್‌ 22ರವರೆಗೆ ಗಡುವು ನೀಡಲಾಗಿತ್ತು. ಆದರೆ, ಕೆಲವೇ ಪ್ರದೇಶಗಳಲ್ಲಿ ಶೇ.20ರಷ್ಟು ನಿವೇಶನಗಳ ಮಾಲೀಕರು ಮಾತ್ರ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

ಹೀಗಾಗಿ ನಗರದ ಎಲ್ಲಾ ಖಾಲಿ ನಿವೇಶನಗಳಲ್ಲೂ ಪರಿಣಾಮಕಾರಿಯಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಐದೂ ನಗರ ಪಾಲಿಕೆಗಳು ಅಗತ್ಯ ಸಿದ್ಧತೆ ಮಾಡಿಕೊಂಡು ಕಾರ್ಯಾಚರಣೆ ನಡೆಸಬೇಕು. ಸ್ವಚ್ಛತಾ ಕಾರ್ಯಕ್ಕೆ ತಗಲುವ ವೆಚ್ಚವನ್ನು ಸಂಬಂಧಪಟ್ಟ ಆಸ್ತಿ ಮಾಲೀಕರಿಂದ ಆಸ್ತಿ ತೆರಿಗೆ ಮೂಲಕ ವಸೂಲಿ ಮಾಡಬೇಕು ಎಂದು ಸೂಚಿಸಿದ್ದಾರೆ.

ನಿವೇಶನಗಳ ಗುರುತಿಸಿ ನೋಟಿಸ್‌ ನೀಡಲು ಸೂಚನೆ

ಸ್ವಚ್ಛತಾ ಕಾರ್ಯ ಅಗತ್ಯವಿರುವ ಖಾಲಿ ನಿವೇಶನಗಳನ್ನು ಕಂದಾಯ ಅಧಿಕಾರಿಗಳು ಗುರುತಿಸಿ ಪಟ್ಟಿ ಮಾಡಬೇಕು. ಪಟ್ಟಿ ಮಾಡಲಾದ ನಿವೇಶನಗಳಿಗೆ ಮಾರ್ಷಲ್‌ಗಳು ಹಾಗೂ ಕಿರಿಯ ಆರೋಗ್ಯ ಪರಿವೀಕ್ಷಕರು ನೋಟಿಸ್‌ ಅಂಟಿಸಬೇಕು.

ಬಳಿಕ ನಗರ ಪಾಲಿಕೆಗಳ ವತಿಯಿಂದಲೇ ಖಾಲಿ ನಿವೇಶನಗಳ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು ಎಂದು ಕೃಷ್ಣ ಬೈರೇಗೌಡ ನಿರ್ದೇಶನ ನೀಡಿದ್ದಾರೆ. ಇದೇ ಗುರುವಾರದಿಂದ ಎಲ್ಲಾ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಖಾಲಿ ನಿವೇಶನಗಳ ಸ್ವಚ್ಛತಾ ಕಾರ್ಯ ಆರಂಭಿಸಬೇಕು. ಮುಂದಿನ ಸೋಮವಾರದಿಂದ ಕಾರ್ಯಾಚರಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನಗರದಾದ್ಯಂತ ಖಾಲಿ ನಿವೇಶನಗಳ ಸ್ವಚ್ಛತೆಗಾಗಿ ಜೆಸಿಬಿ, ಟಿಪ್ಪರ್‌, ಟ್ರ್ಯಾಕ್ಟರ್‌ ಹಾಗೂ ಅಗತ್ಯ ಸಿಬ್ಬಂದಿ ಸೇರಿದಂತೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಸ್ವಚ್ಛತಾ ಕಾರ್ಯ ಕೈಗೊಳ್ಳಲು ಅಗತ್ಯವಿರುವ ಏಜೆನ್ಸಿಗಳನ್ನು ಗುರುತಿಸಿ ಕ್ರಮ ಕೈಗೊಳ್ಳುವಂತೆಯೂ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img