ಕೊಲಂಬೊ: ಜಗತ್ತಿನ ನಂಬರ್ ಒನ್ ಟೆಸ್ಟ್ ಆಲ್ರೌಂಡರ್ ರವೀಂದ್ರ ಜಡೇಜಾ, ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಕೊಲಂಬೊ ಟೆಸ್ಟ್ ಪಂದ್ಯ ಜಡೇಜಾ ಪಾಲಿಗೆ ವಿಶೇಷವಾಗಿದ್ದು, ಇದು ಅವರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ವೃತ್ತಿಜೀವನದ 50ನೇ ಟೆಸ್ಟ್ ಪಂದ್ಯವಾಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಇತಿಹಾಸದಲ್ಲಿ 50 ಟೆಸ್ಟ್ ಪಂದ್ಯಗಳನ್ನು ಆಡಿದ ಭಾರತದ ಹಾಗೂ ಏಷ್ಯಾದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ರವೀಂದ್ರ ಜಡೇಜಾ ಪಾತ್ರರಾಗಿದ್ದಾರೆ. ಟೀಂ ಇಂಡಿಯಾದ ಪ್ರಮುಖ ಬೌಲಿಂಗ್ ಆಲ್ರೌಂಡರ್ ಆಗಿ ಗುರುತಿಸಿಕೊಂಡಿರುವ ಜಡೇಜಾ, ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ತಂಡಕ್ಕೆ ಮಹತ್ವದ ಕೊಡುಗೆ ನೀಡುತ್ತಾ ಬಂದಿದ್ದಾರೆ.
2012ರಲ್ಲಿ ಭಾರತ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ ರವೀಂದ್ರ ಜಡೇಜಾ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಮೊದಲ ಆವೃತ್ತಿಯಿಂದಲೂ ತಂಡದ ಪ್ರಮುಖ ಸದಸ್ಯರಾಗಿದ್ದಾರೆ. 2019-21ರ ಮೊದಲ WTC ಆವೃತ್ತಿಯಲ್ಲಿ ಜಡೇಜಾ ಭಾರತ ಪರ 11 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಬಳಿಕ 2021-23ರ ಅವಧಿಯಲ್ಲಿ 13 ಟೆಸ್ಟ್ ಪಂದ್ಯಗಳು ಹಾಗೂ 2023-25ರ WTC ಅವಧಿಯಲ್ಲಿ 25 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. 2025-27ರ ಸಾಲಿನಲ್ಲೂ 11 ಪಂದ್ಯಗಳನ್ನು ಆಡಿರುವ ಜಡೇಜಾ ಇದೀಗ ಒಟ್ಟು 50 WTC ಪಂದ್ಯಗಳನ್ನು ಪೂರ್ಣಗೊಳಿಸಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಇದುವರೆಗೆ 50 ಪಂದ್ಯಗಳನ್ನು ಆಡಿರುವ ಜಡೇಜಾ, ಐದು ಶತಕಗಳ ಸಹಿತ 2,632 ರನ್ಗಳನ್ನು ಗಳಿಸಿದ್ದಾರೆ. ಬೌಲಿಂಗ್ನಲ್ಲಿ 160 ವಿಕೆಟ್ಗಳನ್ನು ಕಬಳಿಸಿರುವ ಅವರು, ಆಲ್ರೌಂಡರ್ ಆಗಿ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
WTC ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರರ ಪಟ್ಟಿಯಲ್ಲಿ ಜಡೇಜಾ ಅಗ್ರಸ್ಥಾನದಲ್ಲಿದ್ದಾರೆ. 47 ಪಂದ್ಯಗಳೊಂದಿಗೆ ಮೊಹಮ್ಮದ್ ಸಿರಾಜ್ ಎರಡನೇ ಸ್ಥಾನದಲ್ಲಿದ್ದರೆ, ಟೆಸ್ಟ್ ಕ್ರಿಕೆಟ್ಗೆ ವಿದಾಯ ಘೋಷಿಸಿರುವ ವಿರಾಟ್ ಕೊಹ್ಲಿ 46 ಪಂದ್ಯಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ರಿಷಭ್ ಪಂತ್ ಹಾಗೂ ಶುಭ್ಮನ್ ಗಿಲ್ ತಲಾ 42 ಟೆಸ್ಟ್ ಪಂದ್ಯಗಳೊಂದಿಗೆ ನಂತರದ ಸ್ಥಾನಗಳಲ್ಲಿದ್ದಾರೆ.
ಇನ್ನು ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶುಭ್ಮನ್ ಗಿಲ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ದೇವದತ್ ಪಡಿಕ್ಕಲ್ ಸತತ ಎರಡನೇ ಶತಕ ದಾಖಲಿಸಿ 117 ರನ್ ಗಳಿಸಿದರೆ, ಶುಭ್ಮನ್ ಗಿಲ್ 50 ಹಾಗೂ ರಿಷಭ್ ಪಂತ್ 63 ರನ್ಗಳ ಕೊಡುಗೆ ನೀಡಿದರು.
ಧ್ರುವ್ ಜುರೆಲ್ ಅಜೇಯ 89 ರನ್ ಗಳಿಸಿ ಶತಕದತ್ತ ಮುನ್ನಡೆಯುತ್ತಿದ್ದು, 131 ಓವರ್ಗಳ ಅಂತ್ಯಕ್ಕೆ ಭಾರತ 8 ವಿಕೆಟ್ ಕಳೆದುಕೊಂಡು 469 ರನ್ ಗಳಿಸಿತ್ತು. ಈ ಮೂಲಕ ಟೀಂ ಇಂಡಿಯಾ ಕೊಲಂಬೊ ಟೆಸ್ಟ್ನಲ್ಲಿ ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ.



