ವಿಜಯಸಾಕ್ಷಿ ಸುದ್ದಿ, ಗದಗ: ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸದಾ ಸಿದ್ಧವಾಗಿದ್ದು, ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಶಾಂತಿ ಹಾಗೂ ಸೌಹಾರ್ದತೆಯಿಂದ ಈದ್ ಮಿಲಾದ್ ಆಚರಿಸಬೇಕು ಎಂದು ನರೇಗಲ್ಲ ಠಾಣೆ ಪಿಎಸ್‌ಐ ಐಶ್ವರ್ಯ ನಾಗರಾಳ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಈದ್ ಮಿಲಾದ್ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ನರೇಗಲ್ಲ ಪಟ್ಟಣ ಸೇರಿದಂತೆ ಠಾಣಾ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿಯೂ ಹಿಂದೂ-ಮುಸ್ಲಿಂ ಬಾಂಧವರು ಒಗ್ಗಟ್ಟಿನಿಂದ ಹಬ್ಬ ಆಚರಿಸಬೇಕು. ಶಾಂತಿಗೆ ಭಂಗ ತರುವ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಗೊಂದಲ ಅಥವಾ ಅಶಾಂತಿ ಸೃಷ್ಟಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ನರೇಗಲ್ಲ ಠಾಣೆ ವ್ಯಾಪ್ತಿಯ ಜನರು ಶಾಂತಿ ಮತ್ತು ಸೌಹಾರ್ದತೆಗೆ ಹೆಸರಾಗಿದ್ದಾರೆ. ಪಟ್ಟಣದಲ್ಲಿ ಈವರೆಗೆ ಯಾವುದೇ ಗಲಾಟೆ ನಡೆದಿಲ್ಲ. ಎಲ್ಲ ಹಬ್ಬಗಳ ಸಂದರ್ಭದಲ್ಲಿಯೂ ಸಾರ್ವಜನಿಕರು ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೆ ಸಹಕಾರ ನೀಡಿದ್ದಾರೆ. ಇದೇ ರೀತಿಯ ಸಹಕಾರವನ್ನು ಮುಂದುವರಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಎ.ಎ. ನವಲಗುಂದ, ಎಂ.ಎಸ್. ಧಡೇಸೂರಮಠ, ನಿಂಗನಗೌಡ ಲಕ್ಕನಗೌಡ್ರ, ಮಲ್ಲಯ್ಯ ಗುಂಡಗೋಪುರಮಠ, ಈಶ್ವರ ಬೆಟಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪೇದೆ ಬಸವರಾಜ ಮಾಯಮ್ಮನವರ ನಿರ್ವಹಿಸಿದರು.



