ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ಆಝಾದ್ ಕೋ-ಆಪರೇಟಿವ್ ಬ್ಯಾಂಕ್ ಕಳೆದ ಸಾಲಿಗಿಂತ ಈ ವರ್ಷ ಉತ್ತಮ ಪ್ರಗತಿ ಸಾಧಿಸಿದ್ದು, ೨೦೨೫-೨೬ನೇ ಸಾಲಿನಲ್ಲಿ ₹೧ ಕೋಟಿ ೩೦ ಲಕ್ಷ ೬೦ ಸಾವಿರ ನಿವ್ವಳ ಲಾಭ ಗಳಿಸಿದೆ. ಷೇರುದಾರರಿಗೆ ಶೇ.೧೨ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದು ಬ್ಯಾಂಕ್ ಅಧ್ಯಕ್ಷ ಹಾಜಿ ಸರಫರಾಜಅಹ್ಮದ್ ಎಸ್. ಉಮಚಗಿ ತಿಳಿಸಿದರು.
ನಗರದ ಬ್ಯಾಂಕ್ ಸಭಾಂಗಣದಲ್ಲಿ ಭಾನುವಾರ ನಡೆದ ಬ್ಯಾಂಕ್‌ನ ೬೫ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬ್ಯಾಂಕ್‌ನಲ್ಲಿ ೫,೭೯೨ ಸದಸ್ಯರಿದ್ದು, ₹೩ ಕೋಟಿ ೪೦.೨೭ ಲಕ್ಷ ಶೇರು ಬಂಡವಾಳ ಹೊಂದಿದೆ. ₹೧೧೪ ಕೋಟಿ ೬೨ ಲಕ್ಷ ಠೇವಣಿ ಇದ್ದು, ಠೇವಣಿಗಳಿಗೆ ವಿಮಾ ಭದ್ರತೆ ಇದೆ. ಬ್ಯಾಂಕಿನ ದುಡಿಯುವ ಬಂಡವಾಳ ₹೧೩೧ ಕೋಟಿ ೫೭.೬೪ ಲಕ್ಷವಾಗಿದ್ದು, ಶಾಖಾ ಕಚೇರಿಗಳನ್ನು ಒಳಗೊಂಡಂತೆ ಒಟ್ಟು ವ್ಯವಹಾರ ₹೧,೪೦೫ ಕೋಟಿ ೧೨.೩೫ ಲಕ್ಷ ತಲುಪಿದೆ ಎಂದು ಮಾಹಿತಿ ನೀಡಿದರು.
ಬ್ಯಾಂಕಿನ ಪ್ರಗತಿಗೆ ಠೇವಣಿದಾರರು, ಷೇರುದಾರರು ಹಾಗೂ ಸಾಲಗಾರರ ಸಹಕಾರ ಮುಖ್ಯವಾಗಿದೆ. ಪಿಗ್ಮಿ ಸಂಗ್ರಹಕಾರರು ಮತ್ತು ಸಿಬ್ಬಂದಿಯ ಪರಿಶ್ರಮವೂ ಬ್ಯಾಂಕಿನ ಪ್ರಗತಿಗೆ ಕಾರಣವಾಗಿದೆ ಎಂದರು.
ಬ್ಯಾಂಕಿನ ಖಾತೆದಾರರಿಗೆ ಈಗಾಗಲೇ ಎಟಿಎಂ ಕಾರ್ಡ್‌ಗಳನ್ನು ವಿತರಿಸಲಾಗಿದ್ದು, ರಾಜ್ಯ ಹಾಗೂ ಹೊರರಾಜ್ಯಗಳಲ್ಲಿರುವ ಯಾವುದೇ ಎಟಿಎಂನಲ್ಲಿ ಸಹಕಾರಿ ಬ್ಯಾಂಕಿನ ಕಾರ್ಡ್ ಬಳಸಿ ಹಣ ಪಡೆಯಲು ಹಾಗೂ ಹಣ ವರ್ಗಾವಣೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಬಳಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕೆಸಿಸಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಹಾಗೂ ಸಹಕಾರಿ ಧುರೀಣ ರೋಣದ ಐ.ಎಸ್. ಪಾಟೀಲ ಮಾತನಾಡಿ, ಸಹಕಾರಿ ಕ್ಷೇತ್ರದ ಬೆಳವಣಿಗೆಯಲ್ಲಿ ಗದಗ ಜಿಲ್ಲೆಯ ಕೊಡುಗೆ ಮಹತ್ವದ್ದಾಗಿದೆ. ಸಹಕಾರಿ ಸಂಸ್ಥೆಗಳು ಜನಸಾಮಾನ್ಯರ ಆರ್ಥಿಕ ಅಗತ್ಯಗಳಿಗೆ ಸ್ಪಂದಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ನೆರವಾಗುತ್ತಿವೆ. ಆಝಾದ್ ಬ್ಯಾಂಕ್ ತನ್ನ ಆಡಳಿತ, ಹಣಕಾಸಿನ ಸ್ಥಿತಿ ಹಾಗೂ ಮುಂದಿನ ಯೋಜನೆಗಳನ್ನು ಶೇರುದಾರರ ಮುಂದಿಡುವ ಮೂಲಕ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಿರುವುದು ಶ್ಲಾಘನೀಯ ಎಂದರು.
ಬಡವರು, ಕೂಲಿಕಾರರು ಹಾಗೂ ಮಧ್ಯಮ ವರ್ಗದ ಜನರಿಗೆ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ಬ್ಯಾಂಕ್ ಸ್ಥಳೀಯರ ಆರ್ಥಿಕ ಪ್ರಗತಿಗೆ ನೆರವಾಗಿದೆ. ಬ್ಯಾಂಕಿನ ಆರ್ಥಿಕ ಸದೃಢತೆ ಕಾಪಾಡಲು ಪಾರದರ್ಶಕ ಆಡಳಿತ, ಪರಿಣಾಮಕಾರಿ ಸಾಲ ವಸೂಲಾತಿ ಹಾಗೂ ಅನುತ್ಪಾದಕ ಆಸ್ತಿಗಳ ನಿಯಂತ್ರಣಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಶೇರುದಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಎ.ಜಿ. ಯರಗುಡಿ ಸ್ವಾಗತಿಸಿ ಸಭೆಯ ಕಾರ್ಯಸೂಚಿ ಮಂಡಿಸಿ ಅನುಮೋದನೆ ಪಡೆದರು. ಶಾಖಾ ವ್ಯವಸ್ಥಾಪಕ ಆರ್.ಎಂ. ನದಾಫ ಲೆಕ್ಕಪರಿಶೋಧನಾ ವರದಿ ಮಂಡಿಸಿದರು. ನಿರ್ದೇಶಕ ಎನ್.ಬಿ. ಶಾಸ್ತ್ರಿ ನಿವ್ವಳ ಲಾಭ ಹಂಚಿಕೆಯ ವಿವರ ನೀಡಿದರು. ಪ್ರಧಾನ ಕಚೇರಿಯ ವ್ಯವಸ್ಥಾಪಕ ಯಾಸೀನ ಹುಬ್ಬಳ್ಳಿ ವಾರ್ಷಿಕ ಬಜೆಟ್ ಮಂಡಿಸಿ ಅನುಮೋದನೆ ಪಡೆದರು.
ವೇದಿಕೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಹುಲಗಣ್ಣ ಬಳ್ಳಾರಿ, ನಿರ್ದೇಶಕರಾದ ಎನ್.ಬಿ. ಶಾಸ್ತ್ರಿ, ಆರ್.ಎಲ್. ಬಾಗಲಕೋಟ, ಎಂ.ಎ. ಹಣಗಿ, ಗುಲ್ಜಾರ್‌ಭಾನು ಮುಜಾವರ, ಯಲ್ಲಪ್ಪ ತೋಟದ, ರೇಣುಕಾಬಾಯಿ ಕಲಾಲ, ಶಾನವಾಜ ಉಮಚಗಿ, ಬಿ.ಎಸ್. ಢಾಲಾಯತ, ಮಹೇಶ್ವರಯ್ಯ ಕೋಟಗುಣಶಿಮಠ, ಪರಶುರಾಮ ಪಾತ್ರೋಟ, ಎಚ್.ಎನ್. ಇಟಗಿ, ಡಾ. ಪ್ಯಾರಅಲಿ ನೂರಾನಿ, ಆರ್.ಕೆ. ಹಬೀಬ, ಎ.ಎಂ. ಮುಲ್ಲಾ ಹಾಗೂ ಇಸೂಫ್ ಇಟಗಿ ಉಪಸ್ಥಿತರಿದ್ದರು.
ಮಹ್ಮದ್‌ಗೌಸ್ ಜಮಾಲಸಾಬನವರ ಖುರಾನ್ ಪಠಿಸಿದರು. ಎಂ.ಎಂ. ಶಿರಹಟ್ಟಿ ನಿರೂಪಿಸಿದರು. ಎಂ.ಎ. ಹಣಗಿ ವಂದಿಸಿದರು. ಸಭೆಯಲ್ಲಿ ಶೇರುದಾರರು ಹಾಗೂ ಗಣ್ಯರು ಪಾಲ್ಗೊಂಡಿದ್ದರು.



