ವಿಜಯಸಾಕ್ಷಿ ಸುದ್ದಿ, ಗದಗ: ದೇವರು, ಧರ್ಮ ಹಾಗೂ ನಂಬಿಕೆ ಕಳೆದುಕೊಳ್ಳುತ್ತಿರುವ ಈ ಕಲಿಯುಗ ವಿನಾಶದ ಅಂಚಿಗೆ ಬಂದು ನಿಂತಿದೆ. ಮಾನವ ಕುಲದ ರಕ್ಷಣೆ ಗುರು, ಧ್ಯಾನ, ದಾನ, ಧರ್ಮ ಹಾಗೂ ದೇವರ ಆರಾಧನೆಯಿಂದ ಮಾತ್ರ ಸಾಧ್ಯ ಎಂದು ಧಾರವಾಡದ ಸಿದ್ದಸುಕ್ಷೇತ್ರ ನಯಾನಗರದ ಶ್ರೀಗುರು ಅಭಿನವ ಸಿದ್ದಲಿಂಗ ಮಹಾಸ್ವಾಮೀಜಿ ಹೇಳಿದರು.
ನಗರದ ಒಕ್ಕಲಗೇರಿ ಓಣಿಯ ದ್ಯಾಮವ್ವನಕಟ್ಟಿ ಬಳಿ ನಡೆಯುತ್ತಿರುವ ಗದಗ-ಬೆಟಗೇರಿ ಗ್ರಾಮ ದೇವತೆಗಳಾದ ಶ್ರೀ ದ್ಯಾಮವ್ವ ಮತ್ತು ಶ್ರೀ ದುರ್ಗಮ್ಮ ದೇವಿಯರ ಹರಿಜಾತ್ರಾ ಮಹೋತ್ಸವದ 6ನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧಿಕಾರ, ಜಾತಿ, ಗತ್ತು, ದೌಲತ್ತು ತಾಯಿಯ ಎದುರು ನಡೆಯುವುದಿಲ್ಲ. ತಾಯಿಗೆ ತಲೆಬಾಗಿ ನಡೆದರೆ ತಲೆ ಎತ್ತಿ ಬದುಕುವಂತಹ ಜೀವನವನ್ನು ಆಕೆ ನೀಡುತ್ತಾಳೆ. ದೇವರಿಗೆ ಶರಣಾದರೆ ಬದುಕು ಸುಂದರವಾಗುತ್ತದೆ. ಮಾನವ ಜೀವನದ ನಿಜವಾದ ಸುಖ ದೇವರು ಮತ್ತು ಗುರುವಿನ ಆಶೀರ್ವಾದವನ್ನು ಅವಲಂಬಿಸಿದೆ ಎಂದು ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಹಿಂದಿನ ಪೂಜ್ಯರು ನುಡಿದಿದ್ದ ಹಲವು ಭವಿಷ್ಯವಾಣಿಗಳು ಇಂದಿನ ಕಾಲದಲ್ಲಿ ಸತ್ಯವಾಗುತ್ತಿವೆ. ‘ಕಲ್ಲುಕೋಳಿ ಕೂಗ್ಯಾವ’ ಎಂದರೆ ಮೊಬೈಲ್ ಹಾಗೂ ‘ಜೀವವಿಲ್ಲದ ಹಕ್ಕಿ ಹಾರಾವ’ ಎಂದರೆ ವಿಮಾನ ಎಂದು ಅವರು ವ್ಯಾಖ್ಯಾನಿಸಿದರು.
ಗವಿಸಿದ್ದೇಶ್ವರ ಶಾಖಾಮಠದ ಪೂಜ್ಯ ಶ್ರೀ ಶಿವಶಾಂತವೀರ ಮರಿಸ್ವಾಮೀಜಿ ಮಾತನಾಡಿ, ಶ್ರೀ ದ್ಯಾಮಮ್ಮ ಮತ್ತು ದುರ್ಗಮ್ಮ ದೇವಿಯರ ಜಾತ್ರೆ ಹರಕೆ ತೀರಿಸುವ ಜತೆಗೆ ಅರಿವಿನ ಹಾಗೂ ಅನ್ನದಾಸೋಹದ ಜಾತ್ರೆಯಾಗಿದೆ. ಇಂದಿನ ಮಕ್ಕಳು ಸಂಸ್ಕಾರ ಮರೆಯುತ್ತಿದ್ದು, ಪಾಲಕರು ಮೊಬೈಲ್‌ನಲ್ಲಿ ಮುಳುಗಿದ್ದಾರೆ. ಮಕ್ಕಳಲ್ಲಿ ಸಂಸ್ಕಾರ ಹಾಗೂ ಅರಿವು ಮೂಡಿಸುವ ಜವಾಬ್ದಾರಿ ಪಾಲಕರ ಮೇಲಿದೆ ಎಂದರು.
ದೇವರು ಕೊಟ್ಟಿದ್ದನ್ನು ಹಂಚಿಕೊಂಡು ಅದರಲ್ಲಿ ಸುಖಪಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಇದಕ್ಕಿಂತ ಪುಣ್ಯದ ಕಾರ್ಯ ಬೇರೊಂದಿಲ್ಲ ಎಂದು ಶಿವಶಾಂತವೀರ ಮರಿಸ್ವಾಮೀಜಿ ಹೇಳಿದರು.
ಒಗ್ಗಟ್ಟಿಗೆ ಸಾಕ್ಷಿಯಾದ ಹರಿಜಾತ್ರೆ
ರತ್ನಾಕರ ವಾಣಿ ದಿನಪತ್ರಿಕೆ ಸಂಪಾದಕ ಜಗದೀಶ ಪೂಜಾರ ಮಾತನಾಡಿ, 12 ವರ್ಷಗಳಿಗೊಮ್ಮೆ ನಡೆಯುವ ಈ ಹರಿಜಾತ್ರೆಯಲ್ಲಿ ದರ್ಶನ ಪಡೆಯುವುದೇ ಸೌಭಾಗ್ಯ. ಪ್ರತಿದಿನ ಭಕ್ತರಿಗೆ ಪ್ರಸಾದ ವ್ಯವಸ್ಥೆ, ವಿಶೇಷ ಸಾಲು ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ. ದಾನಿಗಳು ತನು-ಮನದಿಂದ ಸೇವೆ ಸಲ್ಲಿಸುತ್ತಿದ್ದು, ಹಿರಿಯರ ಮಾರ್ಗದರ್ಶನದಲ್ಲಿ ಯುವಕರು ಹರಿಜಾತ್ರೆಯನ್ನು ಯಶಸ್ವಿಗೊಳಿಸಿದ್ದಾರೆ ಎಂದರು.
ಟ್ರಸ್ಟ್ ಕಮಿಟಿ ಅಧ್ಯಕ್ಷ ಕೊಟ್ರಪ್ಪ ಕಮತರ ಅಧ್ಯಕ್ಷತೆ ವಹಿಸಿದ್ದರು. ಗದಗ ಆಧ್ಯಾತ್ಮ ವಿದ್ಯಾಶ್ರಮದ ಶಿವಶರಣೆ ಶ್ರೀ ನೀಲಮ್ಮತಾಯಿ ಅಸುಂಡಿ, ಫಕ್ಕೀರಪ್ಪ ಹೆಬಸೂರ, ನಿವೃತ್ತ ನ್ಯಾಯಾಧೀಶ ಎಸ್.ಜಿ. ಪಲ್ಲೇದ, ರಾಜಶೇಖರ ಕಲ್ಲೂರ ಸೇರಿದಂತೆ ಗಣ್ಯರು ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಗಣ್ಯರನ್ನು ಸನ್ಮಾನಿಸಲಾಯಿತು.
ಎಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ ಏನು ಬೇಕಾದರೂ ಮಾಡಲು ಸಾಧ್ಯ ಎಂಬುದಕ್ಕೆ ಈ ಹರಿಜಾತ್ರೆ ಸಾಕ್ಷಿಯಾಗಿದೆ. ಜಾತಿ-ಮತ ಭೇದ ಮರೆತು ಹಿರಿಯರು, ಕಿರಿಯರು ಒಗ್ಗೂಡಿ ಈ ಪುಣ್ಯದ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಎಲ್ಲರೂ ಒಂದಾಗುವುದಕ್ಕೆ ಈ ಜಾತ್ರೆ ನೆಪವಾಗಿದೆ.
— ಜಗದೀಶ ಪೂಜಾರ, ಸಂಪಾದಕ, ರತ್ನಾಕರ ವಾಣಿ ದಿನಪತ್ರಿಕೆ



