ಹೈದರಾಬಾದ್: ಶಾಲೆಯಲ್ಲಿ ಹಿಜಾಬ್ ಧರಿಸಲು ಅನುಮತಿ ಕೋರಿ ಮುಸ್ಲಿಂ ವಿದ್ಯಾರ್ಥಿನಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಎಐಎಂಐಎಂ ಮುಖ್ಯಸ್ಥ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ತೀವ್ರವಾಗಿ ಖಂಡಿಸಿದ್ದಾರೆ.
ಈ ತೀರ್ಪನ್ನು ಇಸ್ಲಾಂ ಮೇಲಿನ ದಾಳಿ ಎಂದು ಕರೆದಿರುವ ಓವೈಸಿ, ಇಸ್ಲಾಂ ಧರ್ಮದಲ್ಲಿ ಯಾವುದು ಅತ್ಯಗತ್ಯ, ಯಾವುದು ಅಲ್ಲ ಎಂಬುದನ್ನು ನಿರ್ಧರಿಸಲು ನ್ಯಾಯಾಧೀಶರು ಯಾರು ಎಂದು ಪ್ರಶ್ನಿಸಿದ್ದಾರೆ. ಇದು ತಮ್ಮ ಧರ್ಮವಾಗಿದ್ದು, ಅದರಲ್ಲಿ ಯಾವುದು ಅತ್ಯಗತ್ಯ ಎಂಬುದನ್ನು ತಾವೇ ತೀರ್ಮಾನಿಸುವುದಾಗಿಯೂ, ಇದು ಧರ್ಮದ ಮೇಲಿನ ನೇರ ದಾಳಿ ಎಂದೂ ಆಕ್ರೋಶ ಹೊರಹಾಕಿದ್ದಾರೆ.
ಧಾರ್ಮಿಕ ಅತ್ಯಗತ್ಯ ಆಚರಣೆಗಳಿಗೆ ಸಂಬಂಧಿಸಿದ ವಿಷಯವನ್ನು ಶಬರಿಮಲೆ ಪ್ರಕರಣದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈಗಾಗಲೇ ಪರಿಶೀಲಿಸುತ್ತಿರುವಾಗ ಅಲಹಾಬಾದ್ ಹೈಕೋರ್ಟ್ ಈ ಕುರಿತು ತೀರ್ಪು ನೀಡಬಾರದಿತ್ತು ಎಂದು ಓವೈಸಿ ಹೇಳಿದರು. ಈ ಆದೇಶ ಸಂವಿಧಾನದ 19ನೇ ವಿಧಿ (ಅಭಿವ್ಯಕ್ತಿ ಸ್ವಾತಂತ್ರ್ಯ) ಮತ್ತು 25ನೇ ವಿಧಿ (ಧಾರ್ಮಿಕ ಸ್ವಾತಂತ್ರ್ಯ)ಗಳಿಗೆ ವಿರುದ್ಧವಾಗಿದೆ ಎಂದೂ,
ಹಿಜಾಬ್ ಧರಿಸುವುದು ತಲೆಯ ಮೇಲೆಯೇ ಹೊರತು ಮನಸ್ಸಿನ ಮೇಲಲ್ಲ ಎಂದೂ ಅಭಿಪ್ರಾಯಪಟ್ಟರು. ಈ ತೀರ್ಪಿನಿಂದ ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹಿನ್ನಡೆಯಾಗಲಿದ್ದು, ಉತ್ತರ ಪ್ರದೇಶದಲ್ಲಿ ಈಗಾಗಲೇ ಪ್ರೌಢಶಾಲೆಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳ ದಾಖಲಾತಿ ಪ್ರಮಾಣ ಅತ್ಯಂತ ಕಡಿಮೆಯಿದ್ದು, ಅವರ ಶಿಕ್ಷಣವನ್ನು ತಡೆಯುವ ಪ್ರಯತ್ನ ಇದಾಗಿದೆ ಎಂದು ಆರೋಪಿಸಿದರು.
ಶಿಸ್ತು ಮತ್ತು ಸಮಾನತೆ ಕಾಯ್ದುಕೊಳ್ಳಲು ಸಮವಸ್ತ್ರ ನಿಯಮ ಜಾರಿಗೊಳಿಸುವ ಸಂಪೂರ್ಣ ಸ್ವಾಯತ್ತತೆ ಶಿಕ್ಷಣ ಸಂಸ್ಥೆಗಳಿಗೆ ಇದೆ ಎಂಬ ನ್ಯಾಯಾಲಯದ ಅಭಿಪ್ರಾಯವನ್ನು ತಿರಸ್ಕರಿಸಿದ ಓವೈಸಿ, ಏಕರೂಪತೆಯೇ ಸಮಾನತೆಯಲ್ಲ ಎಂದು ಪ್ರತಿಪಾದಿಸಿದರು.



