ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಬಸವೇಶ್ವರ ನಗರದ (ಶಹಪೂರಪೇಟೆ) ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿಯ 74ನೇ ಹಾಗೂ ಶ್ರೀ ಭದ್ರಕಾಳಿದೇವಿ ಸಮೇತ 3ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ವಿವಿಧ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು.
ಜಾತ್ರಾ ಮಹೋತ್ಸವದ ಪ್ರಮುಖ ಕಾರ್ಯಕ್ರಮವಾದ ಶ್ರೀ ವೀರಭದ್ರೇಶ್ವರ ಸ್ವಾಮಿ ಹಾಗೂ ಶ್ರೀ ಭದ್ರಕಾಳಿದೇವಿ ಸಮೇತ ಕಲ್ಯಾಣ ಮಹೋತ್ಸವವು ವೇದಘೋಷ, ಮಂಗಳವಾದ್ಯ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು.
ಪುರೋಹಿತರ ನೇತೃತ್ವದಲ್ಲಿ ಗಣಪತಿ ಪೂಜೆ, ಪುಣ್ಯಾಹವಾಚನ, ಸಂಕಲ್ಪ, ದೇವತಾ ಆವಾಹನೆ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ, ವೀರಭದ್ರೇಶ್ವರ ಸ್ವಾಮಿ ಹಾಗೂ ಭದ್ರಕಾಳಿದೇವಿಯ ದೈವಿಕ ಕಲ್ಯಾಣೋತ್ಸವವನ್ನು ಶಾಸ್ತ್ರೋಕ್ತವಾಗಿ ಆಚರಿಸಲಾಯಿತು.
ಸಂಜೆ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಪೂಜಾ ಕೈಂಕರ್ಯಗಳ ಬಳಿಕ ಪವಿತ್ರ ಕಳಸವನ್ನು ದೇವಸ್ಥಾನದ ಶಿಖರದ ಮೇಲೆ ಪ್ರತಿಷ್ಠಾಪಿಸಲಾಯಿತು. ಕಳಸಾರೋಹಣವು ದೇವಾಲಯದ ಪಾವಿತ್ರ್ಯ, ಶಕ್ತಿ ಹಾಗೂ ಧಾರ್ಮಿಕ ಚೈತನ್ಯದ ಸಂಕೇತವಾಗಿದ್ದು, ಈ ಸಂದರ್ಭದಲ್ಲಿ ಭಕ್ತರು ದೇವರ ಕೃಪೆ ಹಾಗೂ ನಾಡಿನ ಸುಭಿಕ್ಷಕ್ಕಾಗಿ ಪ್ರಾರ್ಥಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಗ್ರಾಮದೇವತೆಗಳಿಗೆ ಉಡಿ ತುಂಬುವ ಸಂಪ್ರದಾಯವೂ ಶ್ರದ್ಧಾಭಕ್ತಿಯಿಂದ ನೆರವೇರಿತು. ಸುಮಂಗಲಿಯರು ಹಾಗೂ ಭಕ್ತರು ಅರಿಶಿನ, ಕುಂಕುಮ, ಹೂವು, ತೆಂಗಿನಕಾಯಿ, ಧಾನ್ಯ ಸೇರಿದಂತೆ ಮಂಗಳದ್ರವ್ಯಗಳನ್ನು ಸಮರ್ಪಿಸಿ ದೇವಿಯರಿಗೆ ಉಡಿ ತುಂಬಿದರು.
ರಾತ್ರಿ ದೀಪಸ್ತಂಭಗಳಿಗೆ ದೀಪೋತ್ಸವ ನಡೆಸಲಾಯಿತು. ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ದಿನವಿಡೀ ವಿಶೇಷ ಪೂಜೆ, ಅಭಿಷೇಕ, ಅಲಂಕಾರ, ಆರತಿ ಹಾಗೂ ಪ್ರಸಾದ ವಿತರಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸುತ್ತಮುತ್ತಲಿನ ಪ್ರದೇಶಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರು ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀ ವೀರಭದ್ರೇಶ್ವರ ಸ್ವಾಮಿ ಹಾಗೂ ಶ್ರೀ ಭದ್ರಕಾಳಿದೇವಿಯ ದರ್ಶನ ಪಡೆದು ಪುನೀತರಾದರು.
ಭಕ್ತಾದಿಗಳಿಗೆ ಮಹಾ ಅನ್ನಸಂತರ್ಪಣೆಯನ್ನೂ ಏರ್ಪಡಿಸಲಾಗಿತ್ತು. ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ರಾಚೋಟಿ ಕಾಡಪ್ಪನವರ, ಉಪಾಧ್ಯಕ್ಷ ರಾಜು ತಡಸದ, ಕಾರ್ಯದರ್ಶಿ ನಾಗರಾಜ ಹಳ್ಳಿಕೇರಿ, ಖಜಾಂಚಿ ವಿಶ್ವನಾಥ ಕೆರಕಣ್ಣವರ ಸೇರಿದಂತೆ ಹಿರಿಯರು, ಮಹಿಳೆಯರು, ಬಸವೇಶ್ವರ ನಗರದ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ, ಶಂಕರಲಿಂಗ ದೇವಸ್ಥಾನ ಟ್ರಸ್ಟ್ ಕಮಿಟಿ, ವರದಾನೇಶ್ವರಿ ಮಹಿಳಾ ಮಂಡಳದ ಸರ್ವ ಪದಾಧಿಕಾರಿಗಳು ಹಾಗೂ ಯುವಕ ಮಂಡಳದ ಸದಸ್ಯರು ಜಾತ್ರಾ ಮಹೋತ್ಸವದ ಯಶಸ್ಸಿಗೆ ಶ್ರಮಿಸಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ಆ. 29ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.
ಆ. 31ರಂದು ಸೋಮವಾರ ಬೆಳಿಗ್ಗೆ ರುದ್ರಾಭಿಷೇಕ ಹಾಗೂ ಸಂಜೆ 6.15 ಗಂಟೆಗೆ ಮಹಾರಥೋತ್ಸವ ಜರುಗಲಿದೆ. ಸೆಪ್ಟೆಂಬರ್ 1ರಂದು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಅಗ್ನಿ ಪ್ರವೇಶ ಹಾಗೂ ಸಂಜೆ 6.15 ಗಂಟೆಗೆ ಲಘುರಥೋತ್ಸವ ನಡೆಯಲಿದೆ.
ಸೆಪ್ಟೆಂಬರ್ 4ರಂದು ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಮಹಾಪ್ರಸಾದ ಹಾಗೂ ಸೆಪ್ಟೆಂಬರ್ 8ರಂದು ಸಂಜೆ 7.30 ಗಂಟೆಗೆ ದೀಪಾಲಂಕಾರದೊಂದಿಗೆ ಪಾಲಕಿ ಉತ್ಸವ ನಡೆಯಲಿದೆ ಎಂದು ಜಾತ್ರಾ ಮಹೋತ್ಸವ ಸಮಿತಿ ತಿಳಿಸಿದೆ.
ಶ್ರೀ ವೀರಭದ್ರೇಶ್ವರ ಸ್ವಾಮಿ ಹಾಗೂ ಶ್ರೀ ಭದ್ರಕಾಳಿದೇವಿಯ ಜಾತ್ರಾ ಮಹೋತ್ಸವವು ಭಕ್ತರ ಶ್ರದ್ಧೆ, ಧಾರ್ಮಿಕ ನಂಬಿಕೆ ಮತ್ತು ನಮ್ಮ ಸಾಂಪ್ರದಾಯಿಕ ಸಂಸ್ಕೃತಿಯ ಪ್ರತೀಕವಾಗಿದೆ. ಎಲ್ಲ ಭಕ್ತರ ಸಹಕಾರದಿಂದ ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಲಾಗುತ್ತಿದ್ದು, ಮುಂದಿನ ಕಾರ್ಯಕ್ರಮಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಬೇಕು.
— ರಾಚೋಟಿ ಕಾಡಪ್ಪನವರ, ಅಧ್ಯಕ್ಷರು, ಜಾತ್ರಾ ಮಹೋತ್ಸವ ಸಮಿತಿ



