ಬೆಂಗಳೂರು: ಸಚಿವ ಬಿ.ನಾಗೇಂದ್ರ ರಾಜೀನಾಮೆ ಘೋಷಿಸಿದ ಬೆನ್ನಲ್ಲೇ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಆರ್.ಅಶೋಕ್, “ಭ್ರಷ್ಟ ಕಾಂಗ್ರೆಸ್ ಸರ್ಕಾರ ಜನಾಕ್ರೋಶದ ಮುಂದೆ ಮಂಡಿಯೂರಿ ಶರಣಾಗಿದೆ” ಎಂದು ಟೀಕಿಸಿದ್ದಾರೆ.
ನಾಗೇಂದ್ರ ಅವರನ್ನು ರಕ್ಷಿಸುವ ಉದ್ದೇಶದಿಂದ ವಿಧಾನಮಂಡಲ ಅಧಿವೇಶನವನ್ನೇ ರದ್ದುಪಡಿಸಲಾಗಿತ್ತು ಎಂದು ಆರೋಪಿಸಿದ ಅವರು, ಕೊನೆಗೂ ಬಿಜೆಪಿಯ ಹೋರಾಟಕ್ಕೆ ಮಣಿದು ರಾಜೀನಾಮೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿ ಪಾದಯಾತ್ರೆ ನಡೆಸುವುದಾಗಿ ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್ ಸರ್ಕಾರ ರಾಜೀನಾಮೆ ಪಡೆಯುವ ಮೂಲಕ ತನ್ನ ಮಾನ ಉಳಿಸಿಕೊಳ್ಳುವ ಪ್ರಯತ್ನ ಮಾಡಿದೆ ಎಂದು ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಇನ್ನೂ ವಾಲ್ಮೀಕಿ ನಿಗಮದ ಹಗರಣ ಸಂಬಂಧ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ಘೋಷಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ವೇಳೆ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ಅವರು, ಪಕ್ಷಕ್ಕೆ ಮುಜುಗರ ಆಗಬಾರದು ಅಂತಾ ಸ್ವಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಈ ವೇಳೆ ಭಾವುಕರಾಗಿ ಕಣ್ಣೀರು ಹಾಕಿರುವ ಅವರು, ನನ್ನ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ. ಜನತಾ ನ್ಯಾಯಾಲಯಕ್ಕೆ ಬಂದು ಎಲ್ಲವನ್ನೂ ಎದುರಿಸಿ ಎಂದು ಬಿಜೆಪಿಗರಿಗೆ ಬಹಿರಂಗ ಸವಾಲು ಕೂಡ ಹಾಕಿದ್ದಾರೆ..



