ಬೆಂಗಳೂರು: ರಾಜಧಾನಿಯಲ್ಲಿ ಅಕ್ರಮವಾಗಿ ನೆಲೆಸಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ 31 ಬಾಂಗ್ಲಾದೇಶಿ ಪ್ರಜೆಗಳನ್ನು ಪೊಲೀಸರು ಗಡಿಪಾರು ಮಾಡುವ ಪ್ರಕ್ರಿಯೆ ಆರಂಭಿಸಿದ್ದಾರೆ.
ಬೆಂಗಳೂರಿನ ವಿವಿಧ 10 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬಂಧಿಸಲಾಗಿದ್ದ ಈ ಆರೋಪಿಗಳನ್ನು ಬಿಗಿ ಪೊಲೀಸ್ ಭದ್ರತೆಯೊಂದಿಗೆ ಪಶ್ಚಿಮ ಬಂಗಾಳದ ಗಡಿ ಭಾಗಕ್ಕೆ ಕರೆದೊಯ್ಯಲಾಗುತ್ತಿದೆ.
ಬೆಳಗಿನ ಜಾವವೇ ಪೊಲೀಸರು 31 ಮಂದಿಯನ್ನು ಬೆಂಗಳೂರಿನ ಎಸ್ಎಂವಿಟಿ ರೈಲ್ವೆ ಟರ್ಮಿನಲ್ನಿಂದ ರೈಲಿನ ಮೂಲಕ ಕರೆದೊಯ್ದಿದ್ದಾರೆ. ಸುಮಾರು 20 ಪೊಲೀಸ್ ಸಿಬ್ಬಂದಿಯ ಬಿಗಿ ಭದ್ರತೆಯಲ್ಲಿ ಈ ಗಡಿಪಾರು ಕಾರ್ಯಾಚರಣೆ ನಡೆಯುತ್ತಿದೆ.
ನಾಳೆ ಸಂಜೆ ಸುಮಾರು 5 ಗಂಟೆ ವೇಳೆಗೆ ಪೊಲೀಸ್ ತಂಡ ಬಾಂಗ್ಲಾದೇಶ ಗಡಿ ಸಮೀಪದ ಪಶ್ಚಿಮ ಬಂಗಾಳದ ಮಾಲ್ದಾ ತಲುಪುವ ನಿರೀಕ್ಷೆಯಿದೆ. ಅಲ್ಲಿಂದ ನಿಯಮಾನುಸಾರ ಮುಂದಿನ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುವುದು.



