ಬೆಳಗಾವಿ: ಪಾರ್ಟಿಯಲ್ಲಿ ಹೆಚ್ಚುವರಿ ಚಿಕನ್ ಪೀಸ್ ಬೇಕೆಂಬ ವಿಚಾರಕ್ಕೆ ಇಬ್ಬರು ಕಾರ್ಮಿಕರ ನಡುವೆ ನಡೆದ ಜಗಳ ಕೊನೆಗೆ ಒಬ್ಬನ ಪ್ರಾಣವನ್ನೇ ಬಲಿ ಪಡೆದಿದೆ. ಮೂಡಲಗಿ ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಸೀತಾರಾಮ್ ಎಂಬಾತ ಚಾಕು ಇರಿತಕ್ಕೆ ಬಲಿಯಾಗಿದ್ದು, ಆತನ ಸಹೋದ್ಯೋಗಿ ಅರುಣ್‌ಕುಮಾರ್ ಕೊಲೆ ಆರೋಪದಲ್ಲಿ ಪೊಲೀಸರ ವಶದಲ್ಲಿದ್ದಾನೆ.
ಸೀತಾರಾಮ್ ಹಾಗೂ ಅರುಣ್‌ಕುಮಾರ್ ಮೂಲತಃ ಉತ್ತರ ಪ್ರದೇಶದ ಪಿಲಿಪತ್ ಜಿಲ್ಲೆಯ ಕಬೀರಗಂಜ್ ಗ್ರಾಮದವರು. ಇಬ್ಬರೂ ಮೂಡಲಗಿ ಪಟ್ಟಣದ ಸ್ಟೀಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಸಹೋದ್ಯೋಗಿಗಳಾಗಿದ್ದರು.
ಆಗಸ್ಟ್ 30ರ ರಾತ್ರಿ ಇಬ್ಬರೂ ಸೇರಿದಂತೆ ಕೆಲವರು ಚಿಕನ್ ಪಾರ್ಟಿ ಮಾಡುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಸೀತಾರಾಮ್ ತನಗೆ ಹೆಚ್ಚಿನ ಚಿಕನ್ ಪೀಸ್ ಬೇಕು ಎಂದು ಕೇಳಿದ್ದಾನೆ. ಇದೇ ಸಣ್ಣ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿ, ಪರಿಸ್ಥಿತಿ ಕೈಮೀರಿ ಹೋಗಿದೆ.
ಆರೋಪಿಯು ಚಾಕು ತೆಗೆದುಕೊಂಡು ಸೀತಾರಾಮ್‌ನ ಎದೆಗೆ ಇರಿದಿದ್ದಾನೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಸೀತಾರಾಮ್‌ನನ್ನು ಬಳಿಕ ಅರುಣ್‌ಕುಮಾರ್ ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ.
ಆದರೆ ತನ್ನ ಕೃತ್ಯವನ್ನು ಮುಚ್ಚಿಹಾಕಲು ಸೀತಾರಾಮ್ ಕಟ್ಟಡದ ಮೇಲಿಂದ ಬಿದ್ದು ಗಾಯಗೊಂಡಿದ್ದಾನೆ ಎಂಬ ರೀತಿಯಲ್ಲಿ ಘಟನೆಯನ್ನು ಬಿಂಬಿಸಲು ಆರೋಪಿ ಪ್ರಯತ್ನಿಸಿದ್ದಾನೆ ಎನ್ನಲಾಗಿದೆ.
ಆಸ್ಪತ್ರೆಗೆ ಭೇಟಿ ನೀಡಿದ ಘಟಪ್ರಭಾ ಠಾಣೆ ಪೊಲೀಸರು ಪ್ರಕರಣದ ಬಗ್ಗೆ ಮಾಹಿತಿ ಕಲೆಹಾಕಿ ಅರುಣ್‌ಕುಮಾರ್‌ನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಚಾಕುವಿನಿಂದ ಇರಿದಿರುವುದನ್ನು ಆತ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಚಿಕಿತ್ಸೆ ಪಡೆಯುತ್ತಿದ್ದ ಸೀತಾರಾಮ್ ಬಳಿಕ ಮೃತಪಟ್ಟಿದ್ದು, ಘಟನೆಯಿಂದ ಸ್ಥಳೀಯವಾಗಿ ಆತಂಕ ಮೂಡಿದೆ. ಈ ಕುರಿತು ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ತನಿಖೆ ಮೂಲಕ ಪತ್ತೆಹಚ್ಚುತ್ತಿದ್ದಾರೆ.



