ದಾವಣಗೆರೆ: ಪತಿಯ ಕೊಲೆಗೆ ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ₹2 ಲಕ್ಷ ಸುಪಾರಿ ನೀಡಿದ ಆರೋಪ ಪ್ರಕರಣ ಜಗಳೂರಿನಲ್ಲಿ ಬಯಲಾಗಿದೆ. ದೊಣೆಹಳ್ಳಿ ಹೊಸೂರು ಗ್ರಾಮದ ಬಸವರಾಜ್ (37) ಕೊಲೆ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸಂಚಿನ ಹಿಂದಿನ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ.
ಬಸವರಾಜ್ ಪತ್ನಿ ಸುನೀತಾ ಹಾಗೂ ಬೆಣ್ಣೆಹಳ್ಳಿ ತಿಪ್ಪೇಸ್ವಾಮಿ ನಡುವೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದ್ದು, ಈ ವಿಚಾರ ಬಸವರಾಜ್‌ಗೆ ತಿಳಿದ ಬಳಿಕ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಇದರಿಂದ ಬಸವರಾಜ್‌ನನ್ನು ಹತ್ಯೆ ಮಾಡಲು ಇಬ್ಬರೂ ಸೇರಿ ಹಂತಕರಿಗೆ ₹2 ಲಕ್ಷ ಸುಪಾರಿ ನೀಡಿದ್ದರು ಎನ್ನಲಾಗಿದೆ. ಸಾಲ ಕೊಡಿಸುವುದಾಗಿ ನಂಬಿಸಿ ಬಸವರಾಜ್‌ನನ್ನು ದೊಣೆಹಳ್ಳಿ ಕ್ರಾಸ್‌ನಿಂದ ಕಾರಿನಲ್ಲಿ ಕರೆದೊಯ್ದು ಬಳಿಕ ಹತ್ಯೆ ಮಾಡಲಾಗಿತ್ತು.
ಗಂಡ ನಾಪತ್ತೆಯಾಗಿದ್ದಾನೆ ಎಂದು ಸುನೀತಾ ದೂರು ನೀಡಿದ್ದರಿಂದ ಪ್ರಕರಣ ಆರಂಭದಲ್ಲಿ ನಾಪತ್ತೆ ಪ್ರಕರಣದಂತೆ ದಾಖಲಾಗಿತ್ತು. ಆದರೆ ತಾಂತ್ರಿಕ ಮಾಹಿತಿ ಹಾಗೂ ವಿಚಾರಣೆ ವೇಳೆ ಹತ್ಯೆಯ ಹಿಂದಿನ ಸಂಚು ಬಯಲಾಗಿದೆ.
ಕೃತ್ಯದಲ್ಲಿ ಭಾಗಿಯಾಗಿದ್ದ ಓಂಕಾರಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕಾಗಿ ಜಗಳೂರು ಪೊಲೀಸರು ಬಲೆ ಬೀಸಿದ್ದಾರೆ.



