ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಮಾಜವನ್ನು ತಿದ್ದಿ ರೂಪಿಸುವ ಶಿಕ್ಷಕರು ಸಮಾಜದ ದೊಡ್ಡ ಆಸ್ತಿಯಾಗಿದ್ದಾರೆ. ಗಡಿಯಲ್ಲಿ ಸೈನಿಕರು ದೇಶವನ್ನು ಕಾಯ್ದರೆ, ರೈತರು ಅನ್ನ ನೀಡುತ್ತಾರೆ. ಆದರೆ ತರಗತಿಯ ನಾಲ್ಕು ಗೋಡೆಗಳ ನಡುವೆ ಶಿಕ್ಷಕರು ದೇಶದ ಭವಿಷ್ಯವನ್ನು ನಿರ್ಮಿಸುತ್ತಾರೆ ಎಂದು ಯುವ ಮುಖಂಡ ಸುನೀಲ ಗಂಗಣ್ಣ ಮಹಾಂತಶೆಟ್ಟರ ಹೇಳಿದರು.
ತಾಲೂಕ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ‘ಮಾಸದ ಮಾತು’ ಕಾರ್ಯಕ್ರಮ ಸರಣಿಯ 40ನೇ ಕಾರ್ಯಕ್ರಮವಾಗಿ ಶನಿವಾರ ಶಿಕ್ಷಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ಹಿರಿಯ ಗುರುಚೇತನ: ಸಂವಾದ-ಸಮ್ಮಾನ’ ಕಾರ್ಯಕ್ರಮದಲ್ಲಿ ಸಾರ್ಥಕ 94 ಸಂವತ್ಸರಗಳನ್ನು ಪೂರೈಸಿದ ಆದರ್ಶ ಶಿಕ್ಷಕ ಬಿ.ಎ. ಮುಳ್ಳಳ್ಳಿ ಅವರನ್ನು ಗೌರವಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದ ವಿದ್ಯಾಗುರುಗಳನ್ನು ಸನ್ಮಾನಿಸುವುದು ನಮ್ಮ ಸೌಭಾಗ್ಯ. ಬಿ.ಎ. ಮುಳ್ಳಳ್ಳಿ ಅವರು ಅಂದಿನ ಕಾಲದಲ್ಲಿಯೇ ಶ್ರೇಷ್ಠ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳ ಜೀವನ ರೂಪಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ ಎಂದರು.
ಮುಖ್ಯ ಅತಿಥಿ ಪ್ರಭಾರಿ ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಕೆ. ಹವಾಲ್ದಾರ ಮಾತನಾಡಿ, ನಾಡಿಗೆ ವಿ.ಪಿ. ಬಳಿಗಾರ ಅವರಂತಹ ಶ್ರೇಷ್ಠ ಐಎಎಸ್ ಅಧಿಕಾರಿಗಳನ್ನು ನೀಡಿದ ಶ್ರೇಯಸ್ಸು ಹಿರಿಯ ಗುರು ಬಿ.ಎ. ಮುಳ್ಳಳ್ಳಿ ಅವರಿಗೆ ಸಲ್ಲುತ್ತದೆ ಎಂದರು.
ವಿಶ್ರಾಂತ ಶಿಕ್ಷಣ ಸಂಯೋಜಕ ಐ.ಎಸ್. ಮಡಿವಾಳರ ಮಾತನಾಡಿ, ಅಪಾರ ಶಿಷ್ಯ ಬಳಗ ಹೊಂದಿರುವ ಮುಳ್ಳಳ್ಳಿ ಗುರುಗಳು ಮಾದರಿ ಶಿಕ್ಷಕರಾಗಿದ್ದಾರೆ. 94ರ ಹರೆಯದಲ್ಲಿಯೂ ಅವರ ಜೀವನೋತ್ಸಾಹ ಎಲ್ಲರಿಗೂ ಪ್ರೇರಣೆಯಾಗಿದೆ ಎಂದರು.
ಲಕ್ಷ್ಮೇಶ್ವರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಈಶ್ವರ ಮೆಡ್ಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಪಿಎಂಸಿ ಮಾಜಿ ಅಧ್ಯಕ್ಷ ನೀಲಪ್ಪ ಹತ್ತಿ ಗುರುವಂದನಾ ನುಡಿಗಳನ್ನಾಡಿದರು. ಕಸಾಪ ಹಾಗೂ ಶಿಷ್ಯ ಬಳಗದ ವತಿಯಿಂದ ಬಿ.ಎ. ಮುಳ್ಳಳ್ಳಿ ಅವರಿಗೆ ಗೌರವ ಸನ್ಮಾನ ಸಲ್ಲಿಸಲಾಯಿತು.
ಕಸಾಪದ ಈರಣ್ಣ ಗಾಣಿಗೇರ ಸ್ವಾಗತಿಸಿದರು. ಶಂಕರ ಶಿಳ್ಳಿನ ಹಾಗೂ ಎನ್.ಪಿ. ಪ್ಯಾಟಿಗೌಡ್ರ ಕಾರ್ಯಕ್ರಮ ನಿರ್ವಹಿಸಿದರು. ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ ನಿರೂಪಿಸಿದರು. ಶಿಕ್ಷಕ ರಾಜಣ್ಣ ಮುಳ್ಳಳ್ಳಿ ವಂದಿಸಿದರು. ವಿ.ಎಂ. ಹೂಗಾರ ಗುರುವಂದನಾ ಗೀತೆ ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಗಣ್ಯ ವ್ಯಾಪಾರಸ್ಥ ಶಿವು ವಡಕಣ್ಣವರ, ಈರಣ್ಣ ಬೆಳವಗಿ, ಪ್ರಿಯಾಂಕ ಮುಳ್ಳಳ್ಳಿ, ಶಿಕ್ಷಕಿ ವೀಣಾ ಜಾಧವ, ಪ್ರವೀಣಕುಮಾರ ಮುಳ್ಳಳ್ಳಿ, ದೇವೇಂದ್ರಗೌಡ ಪಾಟೀಲ, ನಾಗನಗೌಡ ಪಾಟೀಲ, ರವಿ ತಂತ್ರಿ ಸೇರಿದಂತೆ ಗಣ್ಯರು ಹಾಗೂ ಶಿಷ್ಯ ಬಳಗದವರು ಉಪಸ್ಥಿತರಿದ್ದರು.



