ವಿಜಯಸಾಕ್ಷಿ ಸುದ್ದಿ, ಗದಗ: ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಕರೆ ನೀಡಿದ್ದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಸ್ಪಂದಿಸಿ ಗದಗ ನಗರದ ಗಾಂಧಿ ಸರ್ಕಲ್ನ ಕೆನರಾ ಬ್ಯಾಂಕ್ ಮುಂಭಾಗ ಶುಕ್ರವಾರ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳು ಪ್ರತಿಭಟನೆ ನಡೆಸಿದರು. ಜಿಲ್ಲೆಯ ವಿವಿಧ ಬ್ಯಾಂಕ್ಗಳ ಬಹುತೇಕ ಸಿಬ್ಬಂದಿ ಕರ್ತವ್ಯದಿಂದ ದೂರ ಉಳಿದು ಮುಷ್ಕರದಲ್ಲಿ ಪಾಲ್ಗೊಂಡರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಯೂನಿಯನ್ ಪ್ರತಿನಿಧಿಗಳು, ಪರಿಷ್ಕೃತ ಸಾಧನೆ ಆಧಾರಿತ ಪ್ರೋತ್ಸಾಹಧನ (PLI) ಯೋಜನೆಯಲ್ಲಿನ ಅಸಮಾನತೆಯನ್ನು ಖಂಡಿಸಿದರು. ಮಾತುಕತೆ ನಡೆಯುತ್ತಿರುವಾಗಲೇ ಯೋಜನೆ ಜಾರಿಗೊಳಿಸಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. 2023ರ ಡಿಸೆಂಬರ್ನಲ್ಲಿ ಒಪ್ಪಿಗೆಯಾಗಿದ್ದ ಐದು ದಿನಗಳ ಬ್ಯಾಂಕಿಂಗ್ ವಾರವನ್ನು ಇನ್ನೂ ಜಾರಿಗೊಳಿಸದಿರುವುದಕ್ಕೂ ಅಸಮಾಧಾನ ವ್ಯಕ್ತಪಡಿಸಿದರು.
ಮುಷ್ಕರದಿಂದ ಗ್ರಾಹಕರಿಗೆ ಉಂಟಾಗುವ ತೊಂದರೆಗೆ ವಿಷಾದ ವ್ಯಕ್ತಪಡಿಸಿದ ನಾಯಕರು, ATM, ನೆಟ್ ಬ್ಯಾಂಕಿಂಗ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಲಭ್ಯವಿರುತ್ತವೆ ಎಂದು ತಿಳಿಸಿದರು. ಬೇಡಿಕೆ ಈಡೇರದಿದ್ದರೆ ಸೆ.28ರಿಂದ 30ರವರೆಗೆ ಮೂರು ದಿನಗಳ ಮುಷ್ಕರ ಹಾಗೂ ಅ.26ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ಎಚ್ಚರಿಕೆ ನೀಡಿದರು.
ಮುಷ್ಕರದಲ್ಲಿ ಹನುಮೇಶ್ ಎಂ. ಗಂಗರಾಹುತಿ, ಎಚ್ಚರ ಸ್ವಾಮಿ ಎಸ್. ನಾಯಕ್, ಅಮರೇಶ್ವರ ಕೆ., ಸಿದ್ದಲಿಂಗಪ್ಪ ಉಮಾಚಗಿ, ಮಂಜುನಾಥ ದೊಡ್ಡಮನಿ, ಬಾಲಾಜಿ ಕುಲಕರ್ಣಿ, ಪ್ರೇಮ್, ಶಿವಾನಂದ, ಲೋಕೇಶ್, ಪಂಪಾಪತಿ, ವಿಶಾಲ್ ನಾಯಕ್, ಹರೀಶ್, ವಿಜಯಲಕ್ಷ್ಮೀ ಅಂಗಡಿ ಹಾಗೂ ಅಕ್ಷತಾ ಸೇರಿದಂತೆ ವಿವಿಧ ಬ್ಯಾಂಕ್ ಸಿಬ್ಬಂದಿ ಪಾಲ್ಗೊಂಡಿದ್ದರು.



