ಚಿತ್ರದುರ್ಗ: ಕಾರೊಂದು ಮರಕ್ಕೆ ಡಿಕ್ಕಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿತ್ರದುರ್ಗ–ಚಳ್ಳಕೆರೆ ಮಾರ್ಗಮಧ್ಯೆ ತೋಪುರ ಮಾಳಿಗೆ ಬಳಿ ನಡೆದಿದೆ.
ಮೃತರನ್ನು ಚಳ್ಳಕೆರೆ ನಿವಾಸಿ ವಿನೋದ್ ಎಂದು ಗುರುತಿಸಲಾಗಿದೆ. ಇವರು ಚಳ್ಳಕೆರೆಯ ಕರ್ನಾಟಕ ಕಟ್‌ಪೀಸ್ ಬಟ್ಟೆ ಅಂಗಡಿ ಮಾಲೀಕರ ಪುತ್ರ ಎಂದು ತಿಳಿದುಬಂದಿದೆ.
ಚಳ್ಳಕೆರೆಯಿಂದ ಚಿತ್ರದುರ್ಗಕ್ಕೆ ಬರುತ್ತಿದ್ದ ವೇಳೆ ತೋಪುರ ಮಾಳಿಗೆ ಬಳಿ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಅಪಘಾತದ ಮಾಹಿತಿ ತಿಳಿದು ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.



