ಬಾಗಲಕೋಟೆ: ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಮೇಲೆ ನಡೆದಿರುವ ಜಾರಿ ನಿರ್ದೇಶನಾಲಯದ ದಾಳಿ ಬಿಜೆಪಿ ನಡೆಸುತ್ತಿರುವ ಕುತಂತ್ರದ ಭಾಗವಾಗಿರಬಹುದು ಎಂದು ಸಚಿವ ವಿಜಯಾನಂದ ಕಾಶಪ್ಪನವರ್ ಆರೋಪಿಸಿದ್ದಾರೆ. ಬಿಜೆಪಿಗೆ ಸೇರ್ಪಡೆಯಾಗದಿದ್ದರೆ ಇಡಿ, ಐಟಿ ದಾಳಿ ನಡೆಸುವುದಾಗಿ ಕಾಂಗ್ರೆಸ್‌ನ 56 ಶಾಸಕರಿಗೆ ಬೆದರಿಕೆ ಹಾಕಲಾಗಿತ್ತು ಎಂದು ಹೇಳಿದ ಅವರು, ತಮ್ಮ ಮೇಲೂ ದಾಳಿ ನಡೆದರೂ ಎದುರಿಸಲು ಸಿದ್ಧ ಎಂದಿದ್ದಾರೆ.
ಈ ಹಿಂದೆ ಕಾಂಗ್ರೆಸ್‌ನ 56 ಶಾಸಕರ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ಅದರಲ್ಲಿ ತಮ್ಮ ಹೆಸರೂ ಇತ್ತು ಎಂದು ಕಾಶಪ್ಪನವರ್ ಹೇಳಿದ್ದಾರೆ. ಅನೇಕರು ತಮ್ಮ ಹೆಸರುಗಳನ್ನು ಆ ಪಟ್ಟಿಯಲ್ಲಿ ನೀಡಿದ್ದರು. ಬಿಜೆಪಿಗೆ ಸೇರ್ಪಡೆಯಾಗದಿದ್ದರೆ ದಾಳಿ ನಡೆಸುವುದಾಗಿ ಹೇಳಲಾಗುತ್ತಿತ್ತು ಎಂದು ಆರೋಪಿಸಿರುವ ಅವರು, ಇಡಿ ಮತ್ತು ಐಟಿ ಅಧಿಕಾರಿಗಳು ಯಾವಾಗ ಬೇಕಾದರೂ ತಮ್ಮ ಮನೆಗೆ ಬರಬಹುದು ಎಂದಿದ್ದಾರೆ.
ಸತೀಶ್ ಜಾರಕಿಹೊಳಿ ಮನೆ ಮೇಲಿನ ದಾಳಿಯ ಹಿಂದೆ ಕಾಂಗ್ರೆಸ್‌ನವರೇ ಇದ್ದಾರೆ ಎಂಬ ಆರೋಪಗಳನ್ನು ತಳ್ಳಿಹಾಕಿದ ಕಾಶಪ್ಪನವರ್, ತಮ್ಮ ನಾಯಕರ ರಾಜಕೀಯ ಬೆಳವಣಿಗೆಯನ್ನು ಸಹಿಸದೆ ಬಿಜೆಪಿ ಕುತಂತ್ರ ನಡೆಸುತ್ತಿದೆ ಎಂದು ದೂರಿದ್ದಾರೆ. ಕಾಂಗ್ರೆಸ್ ನಾಯಕರನ್ನು ಮಾತ್ರ ಗುರಿಯಾಗಿಸಿಕೊಂಡು ಇಡಿ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಅವರು, ಇದು ದ್ವೇಷ ಮತ್ತು ಸೇಡಿನ ರಾಜಕಾರಣ ಎಂದು ಟೀಕಿಸಿದ್ದಾರೆ.
ಬಿಜೆಪಿ ಆಡಳಿತದ ಅವಧಿಯಲ್ಲಿ ನಡೆದಿರುವ ಹಗರಣಗಳನ್ನು ಮುಚ್ಚಿಹಾಕಲಾಗಿದೆ ಎಂದು ಆರೋಪಿಸಿದ ಕಾಶಪ್ಪನವರ್, ಬಿಜೆಪಿ ನಾಯಕರು ವಿಜಯೇಂದ್ರ ಹಾಗೂ ಬಸವರಾಜ ಬೊಮ್ಮಾಯಿ ಅವರ ಮನೆಗಳ ಮೇಲೂ ಇಡಿ ದಾಳಿ ನಡೆಸಲಿ ಎಂದು ಹೇಳಿದ್ದಾರೆ. ದೇಶದಲ್ಲಿ ಬಿಜೆಪಿಯ ಒಬ್ಬ ನಾಯಕನ ಮೇಲೂ ಇಡಿ ದಾಳಿ ನಡೆಸಿಲ್ಲ ಎಂಬುದಾಗಿಯೂ ಅವರು ಆರೋಪಿಸಿದ್ದಾರೆ.
ಇನ್ನು ಸತೀಶ್ ಜಾರಕಿಹೊಳಿ ಅವರ ಇಡಿ ದಾಳಿ ಕುರಿತು ಕಾಂಗ್ರೆಸ್‌ನವರ ಕೈವಾಡವಿದೆ ಎಂಬ ಮಾತುಗಳಿಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೆ.ಎನ್. ರಾಜಣ್ಣ, ಮುಡಾ ಪ್ರಕರಣದಲ್ಲಿ ದೂರು ನೀಡಿದ್ದು ಕಾಂಗ್ರೆಸ್‌ನವರೇ ಅಲ್ಲವೇ ಎಂದು ಪ್ರಶ್ನಿಸಿದ್ದರು. ಅಧಿಕಾರ ವಿಷದಂತೆ, ಗಿಡದ ಸುತ್ತ ಇರುವ ಕಳೆಯಂತೆ ಎಂದು ಹೇಳಿದ್ದ ರಾಜಣ್ಣ, ಸತೀಶ್ ಜಾರಕಿಹೊಳಿ ಅವರು ಹೇಳಿದ್ದನ್ನು ತಾವು ನಂಬುವುದಾಗಿ ತಿಳಿಸಿದ್ದರು.



