ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಕರು ಕೇವಲ ಪಾಠ ಬೋಧನೆಗೆ ಸೀಮಿತರಲ್ಲ. ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿ, ವ್ಯಕ್ತಿತ್ವ ವಿಕಸನ, ಚಿಂತನಶೀಲತೆ ಹಾಗೂ ಜೀವನ ಮೌಲ್ಯಗಳನ್ನು ರೂಪಿಸುವ ಮೂಲಕ ಆಧುನಿಕ ಸಮಾಜದ ನಿರ್ಮಾತೃಗಳಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ ಹೇಳಿದರು.
ನಗರದ ತೋಂಟದಾರ್ಯ ಮಠದ ಅನುಭವ ಮಂಟಪದಲ್ಲಿ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ‘ಶಿಕ್ಷಕರು ಆಧುನಿಕ ಸಮಾಜದ ನಿರ್ಮಾತೃಗಳು’ ವಿಷಯ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು.
ಉತ್ತಮ ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಆಳವಾದ ಪ್ರಭಾವ ಬೀರುವ ಶಕ್ತಿಯಾಗಿದ್ದಾರೆ. ಶಿಕ್ಷಕರಿಂದ ಜ್ಞಾನ ಹಾಗೂ ಮೌಲ್ಯಗಳನ್ನು ಕಲಿತ ವಿದ್ಯಾರ್ಥಿಗಳು ಮುಂದೆ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಾರೆ. ಹೀಗಾಗಿ ಶಿಕ್ಷಕರು ರಾಷ್ಟ್ರದ ಉಜ್ವಲ ಭವಿಷ್ಯ ರೂಪಿಸುವ ಪ್ರಮುಖ ಶಕ್ತಿಯಾಗಿದ್ದಾರೆ ಎಂದರು.
ಮೈಸೂರು ವಿವೇಕಾನಂದ ಯೋಗ ಎಜುಕೇಷನ್ ಆ್ಯಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ನಿಂದ ರಾಜಯೋಗಿ ಟಿ. ಕೃಷ್ಣಮಾಚಾರ್ಯ ಪ್ರಶಸ್ತಿ-2026 ಪಡೆದ ಯೋಗಾಚಾರ್ಯ ಕೆ.ಎಸ್. ಪಲ್ಲೇದ ಮಾತನಾಡಿ, ಉತ್ತಮ ಶಿಕ್ಷಕರು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವ ಮೂಲಕ ಸಮಾಜ ನಿರ್ಮಾಣದ ಕಾರ್ಯಕ್ಕೆ ಕೈಜೋಡಿಸುತ್ತಾರೆ. ವಿದ್ಯಾರ್ಥಿಗಳನ್ನು ಮೌಲ್ಯಯುತ ನಾಗರಿಕರನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಉತ್ತಮ ನಾಗರಿಕರಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಶಿಕ್ಷಕರು ಸಮಾಜದ ಮಾರ್ಗದರ್ಶಕರಾಗಿ ಜ್ಞಾನ ದೀವಿಗೆ ಬೆಳಗಿಸುವ ನಿರಂತರ ಜ್ಯೋತಿಗಳಾಗಿದ್ದಾರೆ ಎಂದರು.
ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಅಧ್ಯಕ್ಷೆ ಜಯಶ್ರೀ ಉಗಲಾಟ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ವಿದ್ಯಾಭ್ಯಾಸ ನೀಡುವುದರ ಜತೆಗೆ ಅವರನ್ನು ಸುಶಿಕ್ಷಿತರನ್ನಾಗಿ ರೂಪಿಸುತ್ತಾರೆ. ನಮ್ಮೆಲ್ಲರ ಬದುಕಿಗೆ ಗುರುಗಳು ಆದರ್ಶವಾಗಿದ್ದು, ಅವರ ಸೇವೆಯನ್ನು ಸ್ಮರಿಸಿ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಗದಗ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತೆ ಭಾರತಿ ಕುಲಕರ್ಣಿ, ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ, ಯೋಗಾಚಾರ್ಯ ಕೆ.ಎಸ್. ಪಲ್ಲೇದ, ಯೋಗ ಶಿಕ್ಷಕರಾದ ಸುನಂದಾ ಜಾನೋಪಂತರ, ಜಯಶ್ರೀ ಡಾವಣಗೆರೆ ಹಾಗೂ ಲಕ್ಷ್ಮೀ ನಿಡವಣಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರು ಕೃತಜ್ಞತೆ ಸಲ್ಲಿಸಿ ಮಾತನಾಡಿದರು.
ಅರುಣಾ ಹಳಕಟ್ಟಿ ವಚನ ಪ್ರಾರ್ಥನೆ ನೆರವೇರಿಸಿದರು. ಶಾರದಾ ಬೊಮ್ಮಸಾಗರ ನಿರೂಪಿಸಿದರು. ರೇಣುಕಾ ಅಮಾತ್ಯ ಹಾಗೂ ಶಶಿಕಲಾ ಮಾಲೀಪಾಟೀಲ ಪರಿಚಯಿಸಿದರು. ಸುಗ್ಗಲಾ ಯಳಮಲಿ ಕಾರ್ಯಕ್ರಮ ನಿರ್ವಹಿಸಿದರು. ಪುಷ್ಪಾ ಬಂಡಾರಿ ವಂದಿಸಿದರು.
ಗೌರವ ಅಧ್ಯಕ್ಷರಾದ ನಿರ್ಮಲಾ ಪಾಟೀಲ, ಅಕ್ಕಮಹಾದೇವಿ ಚಟ್ಟಿ, ಸದಸ್ಯರಾದ ಶೀಲಾ ಗೋಟಡಕಿ, ಶಾರದಾ ಸಜ್ಜನರ, ಜಯಶ್ರೀ ಹುಬ್ಬಳ್ಳಿ, ಅಕ್ಕಮ್ಮ ವಸ್ತ್ರದ, ಶಕುಂತಲಾ ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.



